ಜಿಲ್ಲೆ

ಮಾಗಡಿಯನ್ನು ಪ್ಲಾಸ್ಟಿಕ್​ಮುಕ್ತಗೊಳಿಸಿ ಶಾಸಕ ಬಾಲಕೃಷ್ಣ ಖಡಕ್ ಸೂಚನೆ

ಮಾಗಡಿ

ಪಟ್ಟಣವನ್ನು ಪ್ಲಾಸ್ಟಿಕ್​ಮುಕ್ತವಾಗಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಶಾಸಕ ಎಚ್​.ಸಿ. ಬಾಲಕೃಷ್ಣ ಸೂಚಿಸಿದರು.

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಕವರ್​ಗಳ ರಾಶಿ ಕಾಣುತ್ತಿದೆ. ಆದ್ದರಿಮದ ಕಡ್ಡಾಯವಾಗಿ ಪ್ಲಾಸ್ಟಿಕ್​ ಬಳಕೆ ಬ್ಯಾನ್​ ಆಗಬೇಕು. ಸ್ವಚ್ಛತೆ ಕಾಪಾಡುವ ಮೂಲಕ ತಿಂಗಳೊಳಗೆ ಪಟ್ಟಣವನ್ನು ಪ್ಲಾಸ್ಟಿಕ್​ಮುಕ್ತಗೊಳಿಸಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಕಾಯೋರ್ನ್ಮುಖರಾಗಬೇಕು ಎಂದು ತಿಳಿಸಿದರು.

ಕೆಎಂಆರ್​ಪಿಯಲ್ಲಿ ಭ್ರಷ್ಟಾಚಾರ

ಮಾಗಡಿಯಲ್ಲಿ ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ದಿನದ 24 ಗಂಟೆ ಕುಡಿವ ನೀರಿನ ಪೂರೈಕೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆ ಕುರಿತು ಪುರಸಭೆಯಲ್ಲಿ ಮಾಹಿತಿಯೇ ಇಲ್ಲ. ಇಂಜಿನಿಯರ್​ ಮತ್ತು ಗುತ್ತಿಗೆದಾರರು ಸೇರಿ ನೀರು ಕುಡಿದಂತೆ ಹಣ ನುಂಗಿದ್ದಾರೆಯೇ ಹೊರೆತು ಮಾಗಡಿ ಜನರಿಗೆ ಕುಡಿಯಲು ನೀರು ಕೊಡಲಿಲ್ಲ. ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ವಾಸನೆ ಬರುತ್ತಿದ್ದು, ಮುಂದಿನ ಮಂಗಳವಾರ ಯೋಜನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಉನ್ನತ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ಶಾಸಕರು ತರಾಟೆ ತೆಗೆದುಕೊಂಡರು. ಹಾಗೂ ಜತೆಗೆ ಮುಖ್ಯ ಇಂಜಿನಿಯರ್​ ಅವರನ್ನೂ ಕರೆತರುವಂತೆ ತಿಳಿಸಿದರು.

ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ

ಇಂಜಿನಿಯರ್​ಗಳ ಬೇಜವಾಬ್ದಾರಿಯಿಂದ ಸಮರ್ಪಕವಾಗಿ ಒಳಚರಂಡಿ ಕಾಮಗಾರಿ ನಡೆಯದೆ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯತ್ತಿದೆ. ಇದರಿಂದಾಗಿ ಪಟ್ಟಣ ಗಬ್ಬುನಾರುತ್ತಿದೆ. ಜತೆಗೆ ಕಲುಷಿತ ನೀರು ಭರ್ಗಾವತಿ ಕೆರೆ ಸೇರುತ್ತಿದೆ. ಇದನ್ನು ತಪ್ಪಿಸಬೇಕು. ವೆಟ್​ವೆಲ್​ಗೆ ಹರಿಯುತ್ತಿಲ್ಲ ಎಂಬ ದೂರಿದೆ. ಮುಂದಿನ ಮಂಗಳವಾರ ಅಧಿಕಾರಿಗಳ ಜತೆ ಭರ್ಗಾವತಿ ಕೆರೆ ಮತ್ತು ವೆಟ್​ವೆಲ್​ ವೀಣೆ ಮಾಡುವುದಾಗಿ ಶಾಸಕರು ತಿಳಿಸಿದರು.

ಬಾಕಿ ತೆರಿಗೆ ಪಾವತಿಸಿ

ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು, ವಾಣಿಜ್ಯ ಮಳಿಗೆಗಳು, ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ 3 ನೋಟಿಸ್​ ಜಾರಿ ಮಾಡಿ ಸ್ಪಂದಿಸದಿದ್ದರೆ ಅಧಿಕಾರಿಗಳು ಪ್ರಕರಣ ದಾಖಲಿಸಲಿದ್ದಾರೆ. ಕರ ವಸೂಲಿ ಮಾಡದ ಅಧಿಕಾರಿಗಳ ಅಮಾನತಿಗೆ ಜಿಲ್ಲಾಧಿಕಾರಿಗೆ ಶಿಾರಸು ಮಾಡಲಾಗುವುದು ಎಂದು ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಐಡಿಎಸ್​ಎಂಟಿ ನಿವೇಶನ ಬಹಿರಂಗ ಹರಾಜು

ಪಟ್ಟಣದ ತಿರುಮಲೆಯಲ್ಲಿರುವ ಐಡಿಎಸ್​ಎಂಟಿ ಬಡಾವಣೆಯಲ್ಲಿರುವ ಖಾಲಿ ನಿವೇಶನಗಳನ್ನು ಬಹಿರಂಗ ಹರಾಜು ಹಾಕು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್​ಗೆ ಶಾಸಕರು ಸೂಚಿಸಿದರು. ಇದರಿಂದ ಬರುವ ಹಣದಲ್ಲಿ ಹೈಟೆಕ್​ ಮಾರುಕಟ್ಟೆ, ಅಂಗಡಿ ಮಳಿಗೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಪುರಸಭೆ ಅಂಗಡಿ ಮಳಿಗೆಗಳ ಬಾಡಿಗೆ ಅವಧಿ ಮುಗಿದಿದ್ದು, ಬಹಿರಂಗ ಹರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈಗಿರುವವರನೇ ಮುಂದುವರಿಸಲು ಅವಕಾಶವಿಲ್ಲ. ಬಹಿರಂಗ ಹರಾಜು ಮೂಲಕವೇ ಮಳಿಗೆ ಪಡೆಯಬೇಕು ಎಂದರು.

ಶಾಸಕರ ಮನೆ ಹಿಂಭಾಗವೇ ಕಸದ ರಾಶಿ

ಮಾಗಡಿಯ ಜ್ಯೋತಿನಗರದಲ್ಲಿರುವ ಶಾಸಕರ ಮನೆ ಹಿಂಭಾಗವೇ ಕಸದ ರಾಶಿ ಇರುವ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದ ಬಾಲಕೃಷ್ಣ, ನಮ್ಮ ಮನೆ ಬಳಿಯೇ ಈ ಸ್ಥಿತಿಯಾದರೆ ಇನ್ನು ಪಟ್ಟಣದ ಸ್ಥಿತಿ ಹೇಗಿರಬಹುದು. ಅಕ್ಷರಶಃ ಪಟ್ಟಣ ದುರ್ವಾಸನೆಯಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುರಿ ಕೋಳಿ ಮಾಂಸದ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ ಎಂದು ಸದಸ್ಯರು ಶಾಸಕರ ಗಮನಕ್ಕೆ ತಂದರು. ಎಲ್ಲ ಒಂದೆಡೆ ಸಿಗುವಂತೆ ಕಸಾಯಿಖಾನೆ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದು ಶಾಸಕರು ಸಮಜಾಯಿಷಿ ನೀಡಿದರು.

ಮುಖ್ಯಾಧಿಕಾರಿ ಕೃಷ್ಣಪ್ರಸಾದ್​ ಮಾತನಾಡಿ, ಪುರಸಭೆಯಲ್ಲಿ ಇಂಜಿನಿಯರ್​ ಹಾಗೂ ಸಿಬ್ಬಂದಿ ಕೊರತೆಯಿದೆ. ಹುದ್ದೆ ಭರ್ತಿಗೆ ಸರ್ಕಾರದಲ್ಲಿ ಚರ್ಚಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಅವಕಾಶವಿದ್ದರೆ ಕ್ರಮ ಕೈಗೊಳ್ಳಿ. ಮೇಲಧಿಕಾರಿಗಳಿಗೆ ಶಿಾರಸು ಮಾಡಿದರೆ ಚರ್ಚಿಸುವುದಾಗಿ ಬಾಲಕೃಷ್ಣ ತಿಳಿಸಿದರು.

ಪುರಸಭೆ ಸದಸ್ಯರಾದ ರಂಗಹನುಮಯ್ಯ, ಎಚ್​.ಜೆ. ಪುರುಷೋತ್ತಮ್​, ಶಿವಕುಮಾರ್​, ರಿಯಾಜ್​, ಭಾಗ್ಯಮ್ಮ ಹೇಮಲತಾ, ಮಮತಾ, ಶಿವರುದ್ರಮ್ಮ, ಅನಿಲ್​ಕುಮಾರ್​, ರೇಖಾ, ನವೀನ್​, ಇಂಜಿನಿಯರ್​ ಪ್ರಶಾಂತ್​ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.