ಜಿಲ್ಲೆ

ಕಣ್ಮರೆಯಾಗುತ್ತಿದೆ ಮಧುರೆ ಕೆರೆ!

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿನ ಪ್ರಮುಖ ಧಾರ್ಮಿಕ ತಾಣವಾಗಿ ಗುರುತಿಸಿಕೊಂಡಿರುವ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮಾ ದೇವಾಲಯಕ್ಕೆ ಹೊಂದಿಕೊಂಡಂತಿರುವ ‘ಮಧುರೆ ಕೆರೆ’ಅಭಿವೃದ್ಧಿ ಕಡೆಗಣಿಸಲ್ಪಟ್ಟಿದೆ. ಪರಿಣಾಮವಾಗಿ ದಿನೆ ದಿನೇ ಮಧುರೆ ಕೆರೆಯೇ ಕಣ್ಮರೆಯಾಗುತ್ತಿದೆಯೇನೋ ಎಂಬ ಅನುಮಾನ ಮೂಡಿಸುತ್ತಿದೆ. ಪ್ರವಾಸಿ ತಾಣವಾಗಿ ರೂಪು ಪಡೆಯಬೇಕಿದ್ದ ಕೆರೆಗೆ ಕಂಟಕ ಎದುರಾಗಿದೆ.

ಜಿಲ್ಲಾಡಳಿತದ ಅವಕೃಪೆಗೆ ತುತ್ತಾಗಿರುವ ಮಧುರೆ ಕೆರೆ ಕಸ ಸುರಿವ ತಾಣವಾಗಿ ಬಳಕೆಯಾಗುತ್ತಿದ್ದು

ಸುಮಾರು 980 ಎಕರೆಯಷ್ಟು ವಿಸ್ತಾರವಾಗಿರುವ ಈ ದೊಡ್ಡ ಕೆರೆ ಸುತ್ತಲೂ ಗಿಡಗಂಟಿಗಳು ಆವರಿಸಿದ್ದು ಕೆರೆಯ ಇರುವಿಕೆಯನ್ನೇ ಮರೆಮಾಚಿದೆ. ತೀವ್ರ ಮಳೆ ಕೊರತೆಯಿಂದ ಕೆರೆಯಲ್ಲಿನ ನೀರು ಬತ್ತಿ ಹೋಗಿತ್ತು. ಆದರೆ ಕಳೆದೆರಡು ವರ್ಷ ಸುರಿದ ವರ್ಷಧಾರೆಗೆ ಮಧುರೆ ಕೆರೆ ತುಂಬಿ ಕಣ್ಣು ಹಾಸಿದಷ್ಟೂ ದೂರ ಜಲರಾಶಿ ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ ಕೆರೆಯ ಸ್ವಚ್ಛತೆ, ರಕ್ಷಣೆ ಬಗ್ಗೆ ಜಿಲ್ಲಾಡಳಿತ ತಾಳಿರುವ ನಿರ್ಲಕ್ಷ್ಯದಿಂದಾಗಿ ಸುಂದರವಾದ ಕೆರೆಯೊಂದು ನೇಪಥ್ಯಕ್ಕೆ ಸರಿಯುವಂತಾಗಿದೆ.

ಹೆಸರುಘಟ್ಟ ಕೆರೆ ಸೇರುತ್ತದೆ: ಕಾಡನೂರು, ಕಾಡನೂರುಪಾಳ್ಯದ ಕೆರೆ, ಹೊನ್ನಾವರ ಕೆರೆ ಸೇರಿ ಅನೇಕ ಹಳ್ಳಿಗಳ ಸಣ್ಣಪುಟ್ಟ ಕೆರೆಗಳು ತುಂಬಿ ಕೋಡಿ ಹರಿದು ಬರುವ ನೀರು ಮಧುರೆ ಕೆರೆಗೆ ಸೇರಿ ಕೆರೆ ಒಡಲು ಭರ್ತಿಯಾಗಿದೆ,. ಇಲ್ಲಿ ಕೋಡಿ ಬಿದ್ದು ಮುಂದೆ ಬ್ಯಾತ ಕೆರೆ ಮೂಲಕ ಅರ್ಕಾವತಿ ನದಿ ಪಾತ್ರದ ಹೆಸರಘಟ್ಟ ಕೆರೆ ಸೇರುತ್ತದೆ.

ಲಕ್ಷಾಂತರ ರೂ. ಹಣ ನೀರುಪಾಲು: ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡರ ಅವಧಿಯಲ್ಲಿ ಮಧುರೆ ಕೆರೆ ಅಭಿವೃದ್ಧಿಗೆ ಚಾಲನೆ ದೊರೆತಿತ್ತು. ಕೆರೆಯ ನಾಲ್ಕೂ ದಿಕ್ಕಿನಲ್ಲಿ ಸಣ್ಣ ದ್ವೀಪಗಳನ್ನು ನಿರ್ಮಾಣ ಮಾಡಿ ದೋಣಿ ವಿಹಾರ ಆರಂಭಿಸುವ ಕಾಯಕಕ್ಕೆ ರೂಪುರೇಷೆ ಸಿದ್ದವಾಗಿತ್ತು. ಲಕ್ಷಾಂತರ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭವಾದರೂ ಪೂರ್ಣಗೊಳ್ಳದೆ ಸ್ಥಗಿತಗೊಂಡಿತ್ತು. ಲಕ್ಷಾಂತರ ರೂ.ಹಣ ನೀರುಪಾಲಾಯಿತೇ ಹೊರತು ಇದರಿಂದ ಯಾವುದೇ ಪ್ರಯೋಜವಾಗಲಿಲ್ಲ. ನಂತರದಲ್ಲಿ ಜಿಪಂ ಸಿಇಒ ಆಗಿದ್ದ ರೇವಣಪ್ಪ ಅವರು ಕೆರೆ ಸುತ್ತಲೂ ೆನ್ಸಿಂಗ್ ಹಾಕುವ ಸಂಬಂಧ ನರೇಗಾ ಯೋಜನೆಯಡಿ ಕ್ರೀಯಾಯೋಜನೆ ಸಿದ್ದಪಡಿಸಿದ್ದರು. ಆದರೆ ಆ ಕಾಮಗಾರಿಯೂ ಅರ್ಧಕ್ಕೆ ಮೊಟಕುಗೊಂಡಿತ್ತು. ಆದಾದ ಬಳಿಕ ಬಂದ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಈ ಬಗ್ಗೆ ಗಮನ ಹರಿಸದ ಪರಿಣಾಮ ಮಧುರೆ ಕೆರೆ ಅವಗಣನೆಗೆ ತುತ್ತಾಗುವಂತಾಗಿದೆ. ಪ್ರಮುಖ ಪ್ರವಾಸಿ ತಾಣವಾಗಿ ಮುನ್ನೆಲೆಗೆ ಬರಬೇಕಿದ್ದ ಕೆರೆ ಅಧಿಕಾರಿಗಳ ನಿರ್ಲಕ್ಷ್ಯದ ಲವಾಗಿ

ಪಕ್ಷಿ ಸಂಕುಲವೂ ಕಣ್ಮರೆ: ಮಧುರ ಕೆರೆ ಇತಿಹಾಸ ಪ್ರಸಿದ್ಧವಾಗಿದ್ದು, ತರಹೇವಾರಿ ವಿದೇಶಿ ಹಕ್ಕಿಗಳು ಬಂದು ಹೋಗುವ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿಯೂ ಹೆಸರು ಪಡೆದಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಿದೇಶಿ ಹಕ್ಕಿಗಳು ಈ ಭಾಗಕ್ಕೆ ಬಂದು ಸಂತಾನೋತ್ಪತ್ತಿ ನಡೆಸಿ ಮರಿಗಳೊಂದಿಗೆ ಚಿಣ್ಣಾಟವಾಡುವ ದೃಶ್ಯ ಕಂಡುಬರುತ್ತದೆ. ಇದರ ವೀಕ್ಷಣೆಗೆ ಪಕ್ಷಿಪ್ರಿಯರ ದಂಡೆ ನೆರೆಯುತ್ತದೆ, ಆದರೆ ಇತ್ತೀಚಿಗೆ ಕೆರೆಯ ಸುತ್ತಲೂ ಗಿಡಗಂಟಿಗಳು ಬೆಳೆದು ಕೆರೆಯ ಇರುವಿಕೆಯೇ ಕಾಣದಂತಾಗಿದೆ. ಅಲ್ಲದೆ ಕೈಗಾರಿಕೆಗಳ, ಹಾಗೂ ಗ್ರಾಮಗಳ ಚರಂಡಿಯ ಕಲುಷಿತ ನೀರು ಕೆರೆ ಸೇರುತ್ತಿದ್ದು ಪಕ್ಷಿಗಳ ಕಲರವವೂ ಕಣ್ಮರೆಯಾಗುತ್ತಿದೆ.

ದೊಡ್ಡಬಳ್ಳಾಪುರ ಸೇರಿ ಸುತ್ತಮುತ್ತಲ ಪ್ರದೇಶಗಳಿಂದ ಕೋಳಿ ತ್ಯಾಜ್ಯ ಹಾಗೂ ಪ್ರಾಣಿಜನ್ಯ ಕಸವನ್ನು ತಂದು ಕೆರೆಗೆ ಸುರಿಯಲಾಗುತ್ತಿದೆ. ಹಲವು ವರ್ಷದಿಂದ ರಾತ್ರಿ ವೇಳೆ ನಿರಂತವಾಗಿ ಈ ಕೃತ್ಯ ನಡೆಯುತ್ತಿದ್ದರೂ ಪಂಚಾಯಿತಿಯಾಗಲೀ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ. ಕೆರೆ ಸುತ್ತಲೂ ಪೆನ್ಸಿಂಗ್ ಹಾಕಿ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೆರೆಯೇ ಕಣ್ಮರೆಯಾಗಲಿದೆ.

ಸತೀಶ್, ಮಧುರೆ ನಿವಾಸಿ

-------

ಸಂಜೆ ವೇಳೆಯಲ್ಲಿ ಈ ಕೆರೆಯಲ್ಲಿ ಹಲವರು ಮೀನು ಹಿಡಿಯಲು ಬರುತ್ತಾರೆ. ಅವರು ಮೀನು ಹಿಡಿಯುತ್ತಿರುವುದು ಹೊರಗಿನವರಿಗೆ ಕಾಣುವುದೇ ಇಲ್ಲ ಆ ರೀತಿ ಗಿಡಗಂಟಿಗಳು ಬೆಳೆದಿವೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಅವಘಡ ಸಂಭವಿಸಿದರೂ ಗೊತ್ತಾಗುವುದಿಲ್ಲ. ಇನ್ನು ನಗರದ ಹಲವು ಹೋಟೆಲ್‌ಗಳಲ್ಲಿಂದ ರಾತ್ರಿ ವೇಳೆ ಕಸದ ರಾಶಿ ತಂದು ಕೆರೆಗೆ ಸುರಿಯುತ್ತಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಬೇಕಿದ್ದ ಕೆರೆ ದಿನೆ ದಿನೇ ಹಾಳಾಗುತ್ತಿದೆ.

ಸುರೇಶ್‌ಕುಮಾರ್, ದೊಡ್ಡಬಳ್ಳಾಪುರ