ಜಿಲ್ಲೆ

ಐಎಂಎಸ್ಆರ್ ಎಂಬಿಎ ಕಾಲೇಜಿನಲ್ಲಿ ಮ್ಯಾಡ್ಸ್ ಮೀಟ್

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡಿಸ್ ಆ್ಯಂಡ್ ರೀಸರ್ಚ್ (ಐಎಂಎಸ್ಆರ್) ಎಂಬಿಎ ಕಾಲೇಜಿನಲ್ಲಿ ವಿದ್ಯಾಥಿರ್ಗಳಿಗಾಗಿ ರಾಜ್ಯ ಮಟ್ಟದ ಒಂದು ದಿನದ ಮ್ಯಾಡ್ಸ್ ಮೀಟ್ 2ಕೆ23 ಮ್ಯಾನೇಜಮೆಂಟ್ ಫೆಸ್ಟ್ ಅನ್ನು ಜು. 28ರಂದು ಆಯೋಜಿಸಲಾಗಿದೆ ಎಂದು ಐಎಂಎಸ್ಆರ್ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಹನಗಂಡಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಿಂದ ಇಂತಹ ಉತ್ಸವ ಏರ್ಪಡಿಸುವ ಮೂಲಕ ವಿದ್ಯಾಥಿರ್ಗಳಲ್ಲಿ ಉದ್ಯಮಶೀಲತೆ ಬೆಳೆಸಲು ಶ್ರಮಿಸಲಾಗುತ್ತಿದೆ. ನವೀನ ಮತ್ತು ಸೃಜನಶೀಲ ಯುವ ವಿದ್ಯಾರ್ಥಿ ಸಮುದಾಯಕ್ಕಾಗಿ ಉದ್ಯಮಶೀಲತೆ ಅವಕಾಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗುವುದು ಎಂದರು.

ಜು. 28ರಂದು ಬೆಳಗ್ಗೆ 10ಕ್ಕೆ ಮ್ಯಾಡ್ಸ್ ಮೀಟ್ ಫೆಸ್ಟ್ ಉದ್ಘಾಟನೆ ನೆರವೇರಲಿದ್ದು, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಫರ್ನ್ ರೆಸಿಡೆನ್ಸಿ ಹೋಟೆಲ್ ಎಂಡಿ ಗೌತಮ ಹರಧನ ಬ್ಯಾನರ್ಜಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ಫೆಸ್ಟ್ ಸಮಾರೋಪ ನಡೆಯಲಿದೆ.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳು, ಬೇರೆ ರಾಜ್ಯಗಳಿಂದ 15 ಕಾಲೇಜುಗಳು ನೋಂದಣಿ ಮಾಡಿಸಿದ್ದು, ಇನ್ನಷ್ಟು ಕಾಲೇಜುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ತಂಡಗಳು ನವೀನ ಆಲೋಚನೆಗಳೊಂದಿಗೆ ರೋಮಾಂಚಕ ಪ್ರದರ್ಶನ ನೀಡಲಿವೆ. ಈ ತಂಡಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಮ್ಯಾಡ್ಸ್ ಮೀಟ್ ಉತ್ಸವದಲ್ಲಿ ಕರ್ಟನ್ ರೈಸರ್, ರೈಸಿಂಗ್ ಪಲಾಡಿನ್, ಮ್ಯಾಚ್ವಿಜ್, ನೋವಾಸ್& ದಿ ಸೋಶಿಯಲ್ ಎಂಟರ್ಪ್ರಿನರ್ ಎಂಬ ನಾಲ್ಕು ಸುತ್ತುಗಳಿರುತ್ತವೆ. ಪ್ರತಿ ತಂಡದಲ್ಲಿ ಐದು ವಿದ್ಯಾಥಿರ್ಗಳ ಭಾಗವಹಿಸಲು ಅವಕಾಶವಿದೆ ಎಂದು ಡಾ. ಹನಗಂಡಿ ತಿಳಿಸಿದರು.
ಸಂಯೋಜಕ ಪ್ರೊ. ಅಮಿತ್ ಅಂಗಡಿ, ಅಮಿತ್ ಮಹಾಜನ್ ಗೋಷ್ಠಿಯಲ್ಲಿದ್ದರು.