ಕುರುಗೋಡು:ಮದಕರಿ ನಾಯಕ ಒಂದು ಸಮಾಜಕ್ಕೆ ಸೀಮಿತವಾದ ರಾಜನಲ್ಲ. ಅವರ ಆಳ್ವಿಕೆ ಅವಧಿಯಲ್ಲಿ ಎಲ್ಲ ಸಮಾಜದ ಹಿತ ಕಾಯುವ ಕೆಲಸ ಮಾಡಿದ್ದಾರೆ ಎಂದು ವಾಲ್ಮೀಕಿ ಸಮಾಜದ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಸಮೀಪದ ಸೋಮಸಮುದ್ರದಲ್ಲಿ ಮಹರ್ಷಿ ವಾಲ್ಮೀಕಿಯ ಗೋಪುರ ಕಳಶಾರೋಹಣ ಮತ್ತು ವೀರ ಮದಕರಿ ನಾಯಕ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಇದನ್ನು ಓದಿ: ಮದಕರಿ ನಾಯಕರ ಮಹಾದ್ವಾರ ತೆರವಿಗೆ ಖಂಡನೆ
ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಚಿತ್ರದುರ್ಗ ನಾಯಕ ಅರಸರಲ್ಲಿ ಇವರೊಬ್ಬ ದೊರೆಯಾಗಿದ್ದರು. ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲಾ ಹರಡಲು ಕಾರಣರಾದರು. ಈತನ ಆಳ್ವಿಕೆಯಿಂದ ಚಿತ್ರದುರ್ಗ ಸಂಸ್ಥಾನವು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದೆ ಎಂದರು.
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಚಿತ್ರದುರ್ಗದ ಇತಿಹಾಸದಲ್ಲಿ ವೀರ ಮದಕರಿ ನಾಯಕ, ಬಿಚ್ಚುಗತ್ತಿ ಭರಮಣ್ಣ ಸೇರಿ ಮದಕರಿಯ ನಾಯಕರ ವಂಶದಲ್ಲಿ ಒಟ್ಟು 11ಜನ ರಾಜರು ಆಡಳಿತ ನಡೆಸಿದ್ದಾರೆ. ಅವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದವು. ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಕೆರೆ ಕಟ್ಟೆಗಳನ್ನು ನಿರ್ಮಿಸಿದರು.
ಉತ್ತಮ ಆಡಳಿತ ನೀಡುವುದರ ಜೊತೆಗೆ ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದರು. ಅವರ ಕಾರ್ಯ ವೈಖರಿಗೆ ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ನಿರ್ಮಿಸಿರುವ ಅನೇಕ ಕಲ್ಯಾಣಿಗಳೇ ಸಾಕ್ಷಿಯಾಗಿ ಇಂದಿಗೂ ಗೋಚರಿಸುತ್ತಿದೆ ಎಂದರು.
ಗ್ರಾಮದ ಪ್ರಮುಖ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹರ್ಷಿಗಳ ಗೋಪುರ ಕಳಸಾರೋಹಣ ಮತ್ತು ಮದಕರಿ ನಾಯಕ ಪುತ್ಥಳಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಪುತ್ಥಳಿ ನಿರ್ಮಾಣ ಮಾಡಿದ ಶಿವಮೊಗ್ಗದ ಶಿಲ್ಪಿ ವಿನಾಯಕ ಅವರಿಗೆ ಸನ್ಮಾನ ಮಾಡಲಾಯಿತು.
ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ಗ್ರಾಪಂ ಅಧ್ಯಕ್ಷೆ ಶಾರದಾ ಪವಾಡಿ ರಮೇಶ, ಸಿರುಗುಪ್ಪ ದರಪ್ಪ ನಾಯಕ, ಬಿ.ಎಂ.ಸತೀಶ, ತೆಕ್ಕಲಕೋಟೆ ನರೇಂದ್ರಸಿಂಹ, ಹನುಮಂತಪ್ಪ, ಎಂ.ರಮೇಶ, ನಾಗರಾಜ, ಚಿದಾನಂದ, ಮಧು ಚಂದ್ರಶೇಖರ, ತಿಪ್ಪೇಸ್ವಾಮಿ ಇತರರಿದ್ದರು.