ಮಂಡ್ಯ: ಮಡಿವಾಳ ವೃತ್ತಿಯಲ್ಲಿ ಕಾಯಕ ನಿಷ್ಠೆ ಕಂಡವರುವರು ಮಡಿವಾಳ ಮಾಚಿದೇವ ಎಂದರೆ ತಪ್ಪಾಗುವುದಿಲ್ಲ. ತಮ್ಮ ಕೆಲಸವನ್ನು ಅವರು ವೃತ್ತಿಯಾಗಷ್ಟೇ ಪರಿಗಣಿಸದೆ ದೇವರ ಕೆಲಸವೆಂದು ಜನರ ಸೇವೆ ಮಾಡುತ್ತಿದರು. ಅವರ ಆಲೋಚನೆಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅಂಟಿಕೊಂಡಿದ್ದ ಮೋಸ, ದರೋಡೆ, ವಂಚನೆಗಳಂತಹ ಅನಾಚಾರಗಳನ್ನು ಹೋಗಲಾಡಿಸಲು ದೃಢ ಸಂಕಲ್ಪ ತೊಟ್ಟಿ ನಿಂತ ದಾರ್ಶನಿಕ ವ್ಯಕ್ತಿ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಾಚಿದೇವ ಅವರ ಕೊಡುಗೆ ನಿಜಕ್ಕೂ ಅಪಾರ ಎಂದರು.
ಉಪನ್ಯಾಸ ನೀಡಿದ ಉಪ ಪ್ರಾಂಶುಪಾಲ ಕೊತ್ತತ್ತಿ ರಾಜು, ಸಮಾಜದಲ್ಲಿ ಹೀನಾಯವಾಗಿ ಕಾಣುತ್ತಿದ ಮಡಿವಾಳ ವೃತ್ತಿಗೆ ಘನತೆ, ಗೌರವ ತಂದು ಕೊಟ್ಟವರು ಮಡಿವಾಳ ಮಾಚಿದೇವ. ಅವರು ಬಟ್ಟೆಯನ್ನು ಮಾತ್ರ ಮಡಿ ಮಾಡಿದವರಲ್ಲ. ಬದಲಿಗೆ ಅನಾಚಾರಗಳನ್ನು ತೊಳೆದು ಸಮಾಜವನ್ನು ಮಡಿ ಮಾಡಿದವರು. 12ನೇ ಶತಮಾನದ ವಚನಕಾರರ ಪೈಕಿ ಮಡಿವಾಳ ಮಾಚಿದೇವ ಅವರು ವೇದಪುರಾಣ, ಪರಾಂಗತ, ಸಾಹಿತ್ಯ, ಸಂಸ್ಕೃತಿ, ಬರವಣಿಗೆಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆಗೆ ಅವರ ವಚನಗಳನ್ನು ಓದುವಂತೆ ನಾವೆಲ್ಲ ಒಟ್ಟುಗೂಡಿ ಅರಿವು ಮೂಡಿಸಬೇಕು ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಾಜಿ ಸದಸ್ಯೆ ಪದ್ಮಾ ನವೀನ್, ಮಡಿವಾಳ ಸಂಘದ ಅಧ್ಯಕ್ಷ ರವಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಗೋವಿಂದ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದವರನ್ನು ಸನ್ಮಾನಿಸಲಾಯಿತು.