ಬಾಗೇಪಲ್ಲಿ: ಮಡಿವಾಳ ಮಾಚಿದೇವರು ಕಾಯಕ ತತ್ವದಲ್ಲಿ ಹೆಚ್ಚು ನಂಬಿಕೆ ಇಟ್ಟವರಾಗಿದ್ದು, ಅಸಮಾನತೆಯನ್ನು ಹೋಗಲಾಡಿಸುವ ಮಾರ್ಗದಲ್ಲಿ ನಡೆದಾಗ ಅವರ ತತ್ವಾದರ್ಶಗಳನ್ನು ಅನುಸರಿಸಬೇಕಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ 3ನೇ ವಾರ್ಡಿನ ಧೋಬಿ ಘಾಟ್‌ನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಹುತೇಕ ವರ್ಗಗಳ ಸಾಮಾಜಿಕ ಅಸಮಾನತೆಯಿಂದ ಶೋಷಣೆಗೆ ಒಳಗಾಗಿದ್ದರು. ಆ ಕಾಲಘಟ್ಟದಲ್ಲಿ ಸರ್ವರಿಗೂ ಸಮಪಾಲು, ಸಹಬಾಳ್ವೆ ಒದಗಿಸಲು ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು ಎಂದು ಹೇಳಿದರು.
ಈ ಭಾಗದಲ್ಲಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ಎಲ್ಲರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅದಕ್ಕೆ ಬೇಕಾದ ಸಹಕಾರ, ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಎಸ್‌ಸಿ, ಎಸ್ಟಿ ಪಟ್ಟಿಗೆ ಸೇರಿಸಲು ಕ್ರಮ
ಅನಾದಿ ಕಾಲದಿಂದಲೂ ಮಡಿವಾಳ ಸಮಾಜ ಎಲ್ಲ ಸಮಾಜದವರ ಬಟ್ಟೆಯ ಕೊಳೆಯನ್ನು ಸ್ವಚ್ಛಗೊಳಿಸುವ ಕಾಯಕವನ್ನು ಮಾಡುತ್ತಾ ಬಂದಿದೆ. ಆದರೂ ಮಡಿವಾಳ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವುದು ಒಂದು ಕಡೆ ಆದರೆ ವ್ಯವಸಾಯ ಮಾಡಲು ಭೂಮಿ ಇಲ್ಲದೆ ಬೇರೆಬೇರೆ ವೃತ್ತಿಗಳನ್ನು ಅಶ್ರಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಗಸರನ್ನು ಮತ್ತು ಸವಿತಾ ಸಮಾಜವನ್ನು ಎಸ್‌ಸಿ ಮತ್ತು ಎಸ್‌ಟಿ ಪಟ್ಟಿಗೆ ಸೇರಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕರು ಹೇಳಿದರು.
ಕಾಯಕದಿಂದ ಸಮಾನತೆ
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಮಡಿವಾಳ ಮಾಚೀದೇವ ಅವರು ಕಾಯಕ ನಿಷ್ಠೆಯುಳ್ಳವರಾಗಿದ್ದು, ಬಟ್ಟೆಗಳನ್ನು ಮಡಿಮಾಡಿ ಶರಣರಿಗೆ ಮುಟ್ಟಿಸುವ ಕಾಯಕ ಮಾಡುತ್ತಿದ್ದರು. ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ, ದುರ್ಗಣವುಳ್ಳವರ ಬಟ್ಟೆಗಳನ್ನೆಂದೂ ಮುಟ್ಟುತ್ತಿರಲಿಲ್ಲ. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂಬುದನ್ನು ಜನಕ್ಕೆ ಸಾರಿದರು. ಹನ್ನೆರಡನೇ ಶತಮಾನದ ಸಾಂಸ್ಕೃತಿಕ ವೀರ, ವಚನಗಳ ರಕ್ಷಕ ಮಡಿವಾಳ ಮಾಚಿದೇವ ಜಂಗಮ ವೇಷದಲ್ಲಿ ಹಿಮಾಲಯಕ್ಕೆ ಬಂದ ಶಿವನ ಬಟ್ಟೆಯನ್ನು ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದು, ಆ ರಕ್ತದಲ್ಲಿ ಬಟ್ಟೆ ಒಗೆದ ಕಥೆ ಮಾಚಿದೇವನ ಕಾಯಕನಿಷ್ಠೆ, ಹಿರಿಮೆಯನ್ನು ಸಾರುತ್ತದೆ ಎಂದು ತಿಳಿಸಿದರು.
ಸಮುದಾಯ ಭವನಕ್ಕೆ ಭೂಮಿ ಪೂಜೆ
ಪಟ್ಟಣದ ಶಿಂಗಿನಾಯಕನದಿನ್ನೆ ಸರ್ವೇ ನಂ.23ರಲ್ಲಿ ಸುಮಾರು 2 ಕೋಟಿ ರೂ. ಬೆಲೆಬಾಳುವ 22 ಗುಂಟೆ ಸ್ಥಳವನ್ನು ದೋಬಿಘಾಟ್ ನಿರ್ಮಿಸಿಕೊಳ್ಳುವುದರ ಜತೆಗೆ ಮಡಿವಾಳ ಮಾಚಿದೇವರ ಭವನ ನಿರ್ಮಾಣಕ್ಕೆ ಎಸ್.ಎನ್.ಸುಬ್ಬಾರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು. ಸುಮಾರು 1 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೀಲಿನಕ್ಷೆ ತಯಾರಿಸಿದ್ದು, ಅದರಲ್ಲಿ ಪ್ರಸ್ತುತ್ತ 20 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಶಾಸಕರು ಈವೇಳೆ ಹೇಳಿದರು.