ಜಿಲ್ಲೆ

ಆಟಿದ ಜೀವನ ಶೈಲಿ ಯುವ ಪೀಳಿಗೆಗೆ ಪರಿಚಯ ಅವಶ್ಯ ಜಿಲ್ಲಾ ಮಡಿವಾಳರ ಸಂಘದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಡಾ.ಸರಳಾ ಕಾಮತ್

ಮಂಗಳೂರು: ತುಳುನಾಡಿನ ಆಚಾರ,ವಿಚಾರ ,ಪರಂಪರೆ ಆನೇಕ ವಿಶಿಷ್ಠತೆ ಮತ್ತು ಜೀವನ ಸಂದೇಶಗಳನ್ನು ಹೊಂದಿದ್ದು ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಆಟಿದ ನೆಂಪು ಕಾರ್ಯಕ್ರಮ ಪೂರಕವಾಗಿದೆ ಎಂದು ಹುಬ್ಬಳ್ಳಿಯ ಹೊಟೇಲ್ ಉದ್ಯಮಿ ಡಾ.ಸರಳಾ ರಮೇಶ್ ಹೇಳಿದ್ದಾರೆ.


ದ.ಕ.ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್ ಮಂಗಳೂರು ಹಾಗೂ ದ.ಕ.ಜಿಲ್ಲಾ ಮಡಿವಾಳರ ಮಹಿಳಾ ಘಟಕ, ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘ ಹಾಗೂ ಮಡಿವಾಳ ಯುವಬಳಗ ಬಂಟ್ವಾಳ ಸಹಯೋಗದಲ್ಲಿ ನಗರದ ಬಂಗ್ರ ಕುಳೂರುನಲ್ಲಿರುವ ದ.ಕ.ಜಿಲ್ಲಾ ಮಡಿವಾಳರ ಸಂಘದ ಅಮೃತ ಸಭಾಂಗಣದಲ್ಲಿ ಭಾನುವಾರ ಜರಗಿದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.


ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರೊ.ಎಂ.ಎಸ್. ಕೋಟ್ಯಾನ್ ಅವರು ಆಟಿ ತಿಂಗಳ ಮಹತ್ವ ಬಗ್ಗೆ ವಿವರಿಸಿ ಮುಂದಿನ ಪೀಳಿಗೆಗೆ ಆಚಾರ,ವಿಚಾರಗಳ ಮಹತ್ವವನ್ನು ತಿಳಿಸುವ ಕಾರ್ಯ ಅಗತ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿ ದ.ಕ.ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಬಿ.ಎನ್. ಮಾತನಾಡಿ ಆಟಿದ ನೆಂಪು ಕಾರ್ಯಕ್ರಮ ನಮ್ಮ ಪರಂಪರೆ , ಸಂಪ್ರದಾಯ ನೆನೆಪಿಸುವ ನಿಟ್ಟಿನಲಿ ಮಹತ್ವದ ಕಾರ್ಯಕ್ರಮ ಎಂದರು. ಇನ್ನೋರ್ವ ಮುಖ್ಯ ಅತಿಥಿ, ಉದ್ಯಮಿ ಕೃಷ್ಣ ಸಾಲಿಯಾನ್ ಆಟಿದ ನೆಂಪು ಕಾರ್ಯಕ್ರಮ ನಿರಂತರ ನಡೆಯಲಿ ಎಂದರು.


ಸಂಘದ ಅಧ್ಯಕ್ಷ ರಾಮಚಂದ್ರ ಕುಡುಪು ಆಟಿದ ನೆಂಪು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತುಳುನಾಡ ದೈವರಾಧಾನಾ ರಕ್ಷಣಾ ಚಾವಡಿಯ ಮಾಜಿ ಅಧ್ಯಕ್ಷ ದೇವರಾಜ ಡಿ.ಬಾಳ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ಮಡಿವಾಳ ಸಮುದಾಯದ ಮಹತ್ವವನ್ನು ವಿವರಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಆಶೋಕ್ ಪೊಳಲಿ ಸ್ವಾಗತಿಸಿ ನಿರೂಪಿಸಿದರು. ದ.ಕ.ಜಿಲ್ಲಾ ಮಡಿವಾಳರ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಆಶಾ ಜಿನೇಂದ್ರ ಮಾಣಿ, ವಂದಿಸಿದರು. ತುಳುನಾಡಿನ ಕೃಷಿ ಬದುಕು, ವೈವಿಧ್ಯಮಯ ಪರಿಕರಗಳು ದೈವರಾಧನೆ ಬಗ್ಗೆ ಮಕ್ಕಳಿಗೆ ರಸ ಪ್ರಶ್ನೆ ಸ್ಪರ್ಧೆ ಜರಗಿತು.


ದ.ಕ.ಜಿಲ್ಲಾ ಮಡಿವಾಳರ ಮಹಿಳಾ ಘಟಕ, ಬಂಟ್ವಾಳ ತಾಲೂಕು ಮಡಿವಾಳ ಸಮಾಜಸೇವಾ ಸಂಘ , ಮಡಿವಾಳ ಯುವಬಳಗ ಬಂಟ್ವಾಳ ವತಿಯಿಂದ ತುಳುನಾಡಿನ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರವೇರಿತು. ತುಳುನಾಡಿನ ಕೃಷಿ ಬದುಕು, ತಿಂಡಿ ತಿನಸುಗಳು, ವೈವಿಧ್ಯಮಯ ಪರಿಕರಗಳ ಪ್ರದರ್ಶನ ಜರಗಿತು.,ಬೆಳ್ತಂಗಡಿ ,ಮೂಲ್ಕಿ, ಮೂಡುಬಿದಿರೆ,ಕಾಸರಗೋಡು ತಾಲೂಕು ಮಡಿವಾಳರ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.