ಕೊಳ್ಳೇಗಾಲ: ಮಡಿವಾಳ ಸಮುದಾಯದ ದೈವ ಭಕ್ತಿ, ಕಾಯಕ ನಿಷ್ಠೆ ಅನನ್ಯವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಮಡಿವಾಳ ಸಮುದಾಯ ಭವನದಲ್ಲಿ ಭಾನುವಾರ ಟೌನ್ ಮಡಿವಾಳ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಅವರು ಮಾತನಾಡಿದರು.ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿ ಮಾಚಿದೇವರು ಪರಿಶುದ್ಧ ಮನದವರಾಗಿದ್ದರು. ಅವರ ಕಾಯಕ ವೈಖರಿ ನಮಗೆಲ್ಲರಿಗೂ ಮಾದರಿಯಾಗಿದೆ. ರಾಜ್ಯ ಸರ್ಕಾರ ಎಲ್ಲ ಸಮುದಾಯದ ಮಹನೀಯರ ಜಯಂತಿಯನ್ನು ಆಚರಣೆ ಮಾಡುತ್ತಿದ್ದು, ಸಮುದಾಯಗಳ ಸ್ಪಂದನೆ ಅಗತ್ಯ ಎಂದರು.
ಮನವಿ:ಮಡಿವಾಳ ಸಮುದಾಯ ಭವನಕ್ಕೆ ಸುತ್ತುಗೋಡೆ ನಿರ್ಮಿಸಿಕೊಡುವಂತೆ, ಪಟ್ಟಣದ ರಸ್ತೆಯೊಂದಕ್ಕೆ ಮಾಚಿದೇವರ ಹೆಸರಿಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿದರು.16 ರಾಜ್ಯಗಳಲ್ಲಿ ಮಡಿವಾಳ ಸಮುದಾಯದವರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲಾಗಿದೆ. ನಮ್ಮ ರಾಜ್ಯದಲ್ಲೂ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಚರ್ಚಿಸಲು ನಿಯೋಗದೊಂದಿಗೆ ಆಗಮಿಸಿ ಎಂದರು. ನಗರಸಭೆ ಸದಸ್ಯರಾದ ಮಾನಸ ಪ್ರಭುಸ್ವಾಮಿ, ಜಿ.ಪಿ.ಶಿವಕುಮಾರ್, ಮಾಜಿ ಸದಸ್ಯ ಅಕ್ಮಲ್ ಪಾಷ, ಯಳಂದೂರು ಚಂದ್ರು, ಕಾರ್ಯದರ್ಶಿ ರವಿ ಬಸ್ತೀಪುರ, ಮಡಿವಾಳ ಸಮಾಜದ ಮುಖಂಡ ಶಿವಮಲ್ಲು, ಟೌನ್ ಮಡಿವಾಳ ಸಂಘದ ಅಧ್ಯಕ್ಷ ಗೋವಿಂದಯ್ಯ, ಉಪಾಧ್ಯಕ್ಷ ಕೆ.ಸಿ.ಗೊವಿಂದರಾಜು ಮತ್ತು ಪದಾಧಿಕಾರಿಗಳು ಇದ್ದರು.