ಜಿಲ್ಲೆ

ಜನವರಿ ೬ ರಂದು ಸದಸ್ಯತ್ವ ದಿನ

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ರಾಜ್ಯದ ಅತಿ ದೊಡ್ಡ ಧಾರ್ಮಿಕ ಸಂಘಟನೆಗಳಾದ ಕೆಎಂಜೆ, ಎಸ್‌ವೈಎಸ್‌ಎಸ್‌ಎಫ್ ಸಂಘಟನೆಗಳ ಸಂಯುಕ್ತ ಸದಸ್ಯತ್ವ ಅಭಿಯಾನ ಭಾಗ ವಾಗಿ ಜ.೬ ರಂದು ಕೊಡಗಿನಲ್ಲಿ ಸದಸ್ಯತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಮೊಹಿದ್ದೀನ್ ಹೇಳಿದರು.

ಧಾರ್ಮಿಕ, ಸಾಮಾಜಿಕ ಮತ್ತು ಮುಸ್ಲಿಂ ಸಮಾಜದ ಸಾರ್ವತ್ರಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಸಂವಿಧಾನ ಬದ್ಧ ಹೋರಾಟ ಮೂಲಕ ಮುಸ್ಲಿಂ ಸಮಾಜದಲ್ಲಿ ಹೊಸ ಛಾಪು ಮೂಡಿಸಿರುವ ಘಟನೆ ಮುಸಲ್ಮಾನರ ರಾಜಕೀಯ ಸಹಿತವಿರುವ ಸಾರ್ವಜನಿಕ ವಿಚಾರಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಬೆನ್ನೆಲುಬಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಳಿತಿನ ಹಾದಿಯಲ್ಲಿ ನಿಮ್ಮದ್ದೂ ಒಂದು ಹೆಜ್ಜೆ ಇರಲಿ ಎಂಬ ಶೀರ್ಷಿಕೆಯಡಿ ೪೭ ವರ್ಷ ಮೇಲ್ಪಟ್ಟವರಿಗೆ ಸದಸ್ಯತ್ವ ನೀಡಿ ಲಕ್ಷಾಂತರ ಕಾರ್ಯ ಕರ್ತರನ್ನು ಸೇರಿಸಿಕೊಳ್ಳುವ ಇರಾದೆ ಹೊಂದಿದೆ. ೩೨ ರಿಂದ ೪೭ ವರ್ಷದೊಳಗಿರುವವರಿಗೆ ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಧ್ಯೇಯ ವಾಕ್ಯದಡಿ ಎಸ್‌ವೈಎಸ್ ಸದಸ್ಯತ್ವ ನೀಡುತ್ತಿದ್ದು, ಈ ಚಟುವಟಿಕೆ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲಾ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.

೧೨ ರಿಂದ ೩೨ ವರ್ಷದೊಳಗಿನ ವಿದ್ಯಾರ್ಥಿಗಳು ಸಹಿತವಿರುವ ಯುವಕರನ್ನು ವ್ಯರ್ಥವಾಗದಿರಲಿ ಯವ್ವನ ಎಂದ ಧ್ಯೇಯ ವಾಕ್ಯದಡಿ ಎಸ್‌ಎಸ್‌ಎಫ್ ಸದಸ್ಯರನ್ನು ತನ್ನ ಸಂಘಟನೆಗೆ ಸೇರ್ಪಡೆಗೊಳಿಸಲಿದೆ. ಸಂಘಟನೆಗಳ ಸದಸ್ಯತ್ವ ಪೂರ್ಣಗೊಂಡ ನಂತರ ವಿವಿಧ ಘಟಕಗಳಲ್ಲಿ ನೂತನ ಸಮಿತಿ ರಚನೆಗೊಳ್ಳಲಿದ್ದು, ಲಕ್ಷಾಂತರ ಸದಸ್ಯರನ್ನೊಳಗೊಳ್ಳುವ ಸಂಘಟನೆಯೂ ಜಿಲ್ಲೆಯ್ಲಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆ ರೂಪಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ, ಧಾರ್ಮಿಕ ಹಾಗೂ ಸಮಾಜ ಸೇವೆಯಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲ ಪಡಿಸುವ ಗುರಿ ಹೊಂದಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭ ಜಾತಿ- ಧರ್ಮ ಭೇದವಿಲ್ಲದೆ ಹಲವರಿಗೆ ಸಹಾಯ ಮಾಡಿ ಸಾರ್ವ ಜನಿಕ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಕೆಎಂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಎಸ್‌ಎಸ್‌ಎಫ್ ರಾಜ್ಯ ಕ್ಯಾಂಪ್ಸ್ ಕಾರ್ಯದರ್ಶಿ ಶರೀಫ್ ಹೊಸತೋಟ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಸಿ.ಎಂ. ಹಂಸ, ಎಸ್‌ವೈಎಸ್ ಜಿಲ್ಲಾ ಖಜಾಂಚಿ ಅಬ್ದುಲ್ಲಾ ನೆಲ್ಲಿಹುದಿಕೇರಿ, ಎಸ್‌ಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ಮುಜೀಬ್ ಕೊಡಂಗೇರಿ ಗೋಷ್ಠಿಯಲ್ಲಿದ್ದರು.