ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗಿನ ಸಂಬಾರ ಪದಾರ್ಥಗಳ ಗುಣಮಟ್ಟ ಕಾಯ್ದುಕೊಂಡರೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು.
ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಸಾಂಬಾರ ಪದಾರ್ಥಗಳ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕೊಡಗಿನಲ್ಲಿ ಏಲಕ್ಕಿ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾಫಿ, ಏಲಕ್ಕಿ, ಕರಿಮೆಣಸು ಕಲಬೆರಕೆಯಾಗುತ್ತಿದೆ. ಸಹಕಾರ ಸಂಘಗಳು
ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ಬದಲು ಗುಣಮಟ್ಟ ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕೆಂದರು.
ಜಿಲ್ಲೆಯ ಏಲಕ್ಕಿ, ಕರಿಮೆಣಸಿಗೆ ಹೆಚ್ಚು ಬೇಡಿಕೆ ಇದೆ. ಲಾಭ ಗಳಿಸಲು ಹೊರಗಿನಿಂದ ತರಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ಔಷಧಗಳನ್ನು ಬಳಸಲಾಗುತ್ತಿದ್ದು, ಇದು ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ. ಹೊರಗಿನಿಂದ ಸಂಬಾರ ಪದಾರ್ಥ ತಂದು ಮಾರಾಟ ಮಾಡುವ ಬದಲು ಬೆಳೆಗಾರರ ಬಳಿಯಿಂದ ನೇರವಾಗಿ ಕೊಂಡು ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬೆಳೆಗಾರರಿಗೆ ಮಾರಕವಾಗಲಿದೆ ಎಂದು ಡಿಸಿ ಆತಂಕ ವ್ಯಕ್ತ ಪಡಿಸಿದರು.
ಏಲಕ್ಕಿ ಹಾರಕ್ಕೆ ಬೇಡಿಕೆ
ಹೊರ ಜಿಲ್ಲೆಯಲ್ಲಿ ಸಭೆ ಸಮಾರಂಭಗಳಿಗೆ ಏಲಕ್ಕಿ ಹಾರಗಳಿಗೆ ಹೆಚ್ಚು ಬೇಡಿಕೆಯಿದೆ. ಜಿಲ್ಲೆಯಲ್ಲಿ ಏಲಕ್ಕಿ ಹಾರ ತಯಾರಿಸಿ ಸಹಕಾರ ಸಂಘ ಗಳ ಮೂಲಕ ಸರ್ಕಾರಿ ಕಾರ್ಯಕ್ರಮಗಳಿಗೆ ನೀಡಿದಲ್ಲಿ ಸಹಕಾರ ಸಂಘ ಹಾಗೂ ಬೆಳೆಗಾರರ ಅಭಿವೃದ್ಧಿಗೆ ಪೂರಕವಾಗಲಿದೆ. ಗುಣಮಟ್ಟದ ಸಂಬಾರ ಪದಾರ್ಥ ಬೆಳೆಯುವ ಬೆಳೆಗಾರರನ್ನು ಪ್ರವಾಸಿಗರಿಗೆ ನೇರವಾಗಿ ಪರಿಚಯಿಸುವ ಮೂಲಕ ಉತ್ತಮ ದರ ಸಿಗುವಂತೆ ಮಾಡಬೇಕೆಂದರು.
ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಏಲಕ್ಕಿಯನ್ನು ಸಂಬಾರ ಪದಾರ್ಥಗಳ ರಾಣಿ ಎಂದು ಕರೆಯಲಾಗುತ್ತಿದೆ. ಹಿಂದೆ ಕೊಡಗಿನಲ್ಲಿ ಪ್ರತಿ ಮನೆ ಮನೆಯಲ್ಲೂ ಏಲಕ್ಕಿ ಕಾಣಬಹುದಿತ್ತು. ಏಲಕ್ಕಿ ಬೆಳೆ ಕುಂಟಿತಗೊಂಡಿದ್ದು, ಹೊರಗಿನಿಂದ ತಂದು ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಬೇಸರ ವ್ಯಕ್ತ ಪಡಿಸಿದರು.
ನಗರಸಭೆ ಸದಸ್ಯ ಬಿ.ವೈ. ರಾಜೇಶ್ ಮಾತನಾಡಿ, ಹೊರಗಿಂದ ಕೊಡಗಿಗೆ ಏಲಕ್ಕಿ ಖರೀದಿಸಲಾಗುತ್ತಿದ್ದು, ಗುಣಮಟ್ಟದ ಉತ್ಪನ್ನ ದೊರೆಯು ತ್ತಿಲ್ಲ. ಇದರಿಂದ ಜಿಲ್ಲೆಯ ಕೃಷಿ ಕ್ಷೇತ್ರದ ಹೆಸರು ಹಾಳಾಗುತ್ತಿದೆ ಎಂದರು. ನಗರಸಭೆ ಸದಸ್ಯ ಎಸ್.ಸಿ. ಸತೀಶ್ ಮಾತನಾಡಿ, ಪ್ರಸ್ತುತ ದಿನ ಗಳಲ್ಲಿ ಲಾಭವನ್ನೇ ಗುರಿಯಾಗಿಸಿಕೊಂಡು ವ್ಯವಹಾರ ನಡೆಸುತ್ತಿರುವುದರಿಂದ ಉತ್ತಮ ಗುಣಮಟ್ಟದ ಸಂಬಾರ ಪದಾರ್ಥ ದೊರಕುವುದು ಕಷ್ಟಕರ ಎಂದರು.
ಕೊಡಗು ಸಹಕಾರ ಸಂಘಗಳ ಉಪನಿಬಂಧಕ ಎಚ್.ಎಸ್. ರಮೇಶ್, ಸಂಬಾರ ಮಂಡಳಿ ಸಹಾಯಕ ನಿರ್ದೇಶಕ ಎಸ್.ಎಸ್. ಬಿಜು ಮಾತನಾಡಿದರು. ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ಅಧ್ಯಕ್ಷ ಸೂದನ ಎಸ್.ಈರಪ್ಪ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ಸಂಘದ ಮಾಜಿ ಅಧ್ಯಕ್ಷರಾದ ಹುದೇರಿ ಬಿ.ರಾಜೇಂದ್ರ, ಮುದ್ದಂಡ ಬಿ.ದೇವಯ್ಯ, ಮಾಚೇಟಿರ ಚೋಟು ಕಾವೇರಪ್ಪ, ಬಿ.ಈ. ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರನ್ನು ಸನ್ಮಾನಿಸಲಾಯಿತು. ಅಂಬೆಕಲ್ಲು ಸುಶೀಲಾ ಪ್ರಾರ್ಥಿಸಿದರು. ಮಂಜುಳಾ ನಿರೂಪಿಸಿದರು. ಕೆ.ಆರ್. ಅನಂತ್ ಕುಮಾರ್ ವಂದಿಸಿದರು.