ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಮುಂಗಾರು ಮಳೆ ಅಬ್ಬರಿಸುವ ಮೊದಲೇ ಅಪಾಯದ ಸ್ಥಿತಿಯಲ್ಲಿರುವ ನಗರದ ನಿವಾಸಿಗಳು ಎಚ್ಚೆತ್ತು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.
ಹೌದು, ಮಳೆಗಾಲ ಶುರುವಾಗುತ್ತಿದ್ದಂತೆಯೇ ಅಪಾಯಕಾರಿ ಪ್ರದೇಶಗಳಲ್ಲಿ ಇರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ನೊಟೀಸ್ ಜಾರಿ ಮಾಡುವುದು… ಅದನ್ನ ನಿರ್ಲಕ್ಷಿಸುವುದು.. 2 ವರ್ಷಗಳ ಹಿಂದಿನವರೆಗೆ ಇದೊಂದು ಸಂಪ್ರದಾಯದಂತೆ ಜಿಲ್ಲೆಯಲ್ಲಿ ನಡೆದು ಬಂದಿತ್ತು. ಆದರೆ 2018ರ ಭೂಕುಸಿತ ಮತ್ತು 2019ರ ಪ್ರವಾಹದಿಂದಾಗಿ ಇದು ಬದಲಾಗಿದ್ದು, ಯಾರು ಹೇಳದಿದ್ದರೂ ಅಪಾಯಕಾರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಕೊಡಗಿನ ಅನೇಕ ಕಡೆಗಳಲ್ಲಿ ಈಗಾಗಲೇ ಮಳೆ ಸುರಿಯಲು ಆರಂಭಿಸಿದೆ. ಅಲ್ಲದೆ ಮುಂಗಾರು ಜಿಲ್ಲೆಗೆ ಕಾಲಿಟ್ಟಿರುವುದನ್ನು ಹವಾಮಾನ ಇಲಾಖೆ ಖಚಿತಪಡಿಸಿದ್ದು, ಬೆಟ್ಟ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರ ಆತಂಕಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳ ಅನಾಹುತದ ಭಯ ಕಾಡುತ್ತಿರುವುದರಿಂದ ಮಡಿಕೇರಿ ಮತ್ತಿತರ ಕಡೆಗಳಲ್ಲಿ ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವ ಮನೆಗಳಿಗೆ ತಮ್ಮ ವಾಸ ಬದಲಿಸಲು ಆರಂಭಿಸಿದ್ದಾರೆ.
ಸ್ವಇಚ್ಛೆಯಿಂದ ಮನೆ ಖಾಲಿ: ಮಡಿಕೇರಿಯ ಎತ್ತರ ಮತ್ತು ಇಳಿಜಾರು ಪ್ರದೇಶಗಳಲ್ಲಿ ಇರುವ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಮತ್ತಿತರ ಅಪಾಯಕಾರಿ ಪ್ರದೇಶಗಳ ನಿವಾಸಿಗಳು ತಾವಿರುವ ಮನೆಗಳನ್ನು ತಾತ್ಕಾಲಿಕವಾಗಿ ಬದಲಿಸುತ್ತಿದ್ದಾರೆ. ಮೊದಲೆಲ್ಲಾ ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಜಿಲ್ಲಾಡಳಿತ ಸೂಚಿಸಿದರೂ ಹೆಚ್ಚಿನವರು ಆದೇಶ ಪಾಲಿಸುತ್ತಿರಲಿಲ್ಲ. ಆದರೆ ಈ ವರ್ಷ ನೊಟೀಸ್ ಕೈ ಸೇರುವುದಕ್ಕೆ ಮೊದಲೇ ಸ್ವ ಇಚ್ಛೆಯಿಂದ ಮನೆ ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.