ಜಿಲ್ಲೆ

ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ ಎಂದ ಎಡಿಜಿಪಿ ಅಲೋಕ್‌ಕುಮಾರ್

reportermys

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಯಾವುದೇ ಅಹಿತಕರ ಘಟನೆ ಎದುರಿಸುವ ಶಕ್ತಿ ಪೊಲೀಸರಿಗೆ ಇದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ಕುಮಾರ್ ಹೇಳಿದ್ದಾರೆ.

ಸಾರ್ವಜನಿಕರಲ್ಲಿ ಧೈರ್ಯ ತುಂಬಲು ಗುರುವಾರ ಮಡಿಕೇರಿಯ ಮುಖ್ಯಬೀದಿಯಲ್ಲಿ ಆಯೋಜಿಸಿದ್ದ ಪೊಲೀಸ್ ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡು ಮಾತನಾಡಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ೫ ಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು. ಜಿಲ್ಲೆಯಲ್ಲಿ ಸಂಭಾವನೀಯ ಅಹಿತಕರ ಘಟನೆ ಎದುರಿಸುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದರು.

ಕೊಡಗು ಗಡಿ ಭಾಗದ ಜಿಲ್ಲೆ. ಅತೀ ಸೂಕ್ಷ್ಮ ಜಿಲ್ಲೆ ಕೂಡ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗಬಾರದು. ೧ ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ೭೦ ಚೆಕ್ ಪೋಸ್ಟ್ ಇದೆ. ಗಡಿಭಾಗವಾದ ಕರಿಕೆ, ಕುಟ್ಟ, ಮಾಕುಟ್ಟದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಪೊಲೀಸ್ ಇಲಾಖೆ, ಸರ್ಕಾರಕ್ಕೆ ಯಾವ ಕಪ್ಪುಚುಕ್ಕೆ ಬರಬಾರದು. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದರು.

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಕೊಡಗಿಗೆ ಆಗಮಿಸುವ ಪ್ರವಾಸಿಗರನ್ನು ಚೆಕ್ ಪೋಸ್ಟ್‌ಗಳಲ್ಲಿ ಸರಿಯಾಗಿ ತಪಾಸಣೆ ಮಾಡಲಾಗುತ್ತದೆ. ಕಿಡಿಗೇಡಿಗಳು, ಸಮಸ್ಯೆ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಎಚ್ಚರಿಸಿದರು.

ನಿಷೇಧಾಜ್ಞೆ ಜಾರಿಯಲ್ಲಿ ಇರುವವರೆಗೂ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವರ್ ಕೊಡಗಿನಲ್ಲಿಯೇ ಇರುತ್ತಾರೆಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ರೂಟ್ ಮಾರ್ಚ್‌ನಲ್ಲಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಎಸ್ಪಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಚಾಮರಾಜನಗರ ಎಎಸ್ಪಿ ಕೆ.ಎಸ್. ಸುಂದರ್‌ರಾಜ್ ಪಾಲ್ಗೊಂಡಿದ್ದರು.

ಮಡಿಕೇರಿ ಸಂತೆ ರದ್ದು
ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಶುಕ್ರವಾರ ನಡೆಯಬೇಕಾಗಿದ್ದ ಮಡಿಕೇರಿಯ ವಾರದ ಸಂತೆ ಇರುವುದಿಲ್ಲ ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸ್ಪಷ್ಟ ಪಡಿಸಿದ್ದಾರೆ. ಅನಿವಾರ್ಯ ಕಾರಣದಿಂದ ವಾರದ ಸಂತೆ ರದ್ದಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.