ಜಿಲ್ಲೆ

ಮಡಿಕೇರಿಗೆ ಓಲ್ವೋ ಬಸ್ ಬೇಕು

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆ ವಿಭಾಗದಿಂದ ಮೈಸೂರಿನಿಂದ ಕುಶಾಲನಗರ ತನಕ ಓಡಿಸಲಾಗುತ್ತಿರುವ ವೋಲ್ವೋ ಎಸಿ ಬಸ್ ಸೇವೆ ಮಡಿಕೇರಿ ತನಕ ವಿಸ್ತರಿಸುವಂತೆ ಪ್ರಯಾಣಿಕರಿಂದ ಒತ್ತಾಯ ಕೇಳಿಬಂದಿದೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕುಶಾಲನಗರ-ಮಡಿಕೇರಿ ಮಧ್ಯೆ ಸಂಚರಿಸುವ ಬಸ್‌ಗಳು ಯಾವಾಗಲೂ ಭರ್ತಿ ಆಗಿರುವುದರಿಂದ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡರೂ ನಿಂತುಕೊಂಡೇ ಪ್ರಯಾಣಿಸುವ ಅನಿವಾರ್ಯತೆ ಇದೆ. ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಸಮಯದಲ್ಲಿ ಮೈಸೂರು ನಗರ ಸಾರಿಗೆಯ ವೋಲ್ವೋ ಸಂಚಾರ ಸೇವೆ ಮಡಿಕೇರಿ ತನಕ ಮುಂದುವರಿದರೆ ದೊಡ್ಡ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮಡಿಕೇರಿ ಡಿಪೋದ ಜನಪ್ರಿಯ ಮಾರ್ಗಗಳಲ್ಲಿ ಒಂದಾದ ಕುಶಾಲನಗರ-ಮಡಿಕೇರಿ ಮಧ್ಯೆ ಸಂಚರಿಸುವ ಬಸ್‌ಗಳು ಸಾಮಾನ್ಯವಾಗಿ ಯಾವಾಗಲೂ ಭರ್ತಿ ಆಗಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಸೀಟ್ ಕೂಡ ಸಿಗುವುದಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರವಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮೈಸೂರು ಅಥವಾ ಹಾಸನ ಭಾಗದಿಂದ ಕುಶಾಲನಗರಕ್ಕಾಗಿ ಮಡಿಕೇರಿಗೆ ತೆರಳುವ ಬಸ್‌ಗಳು ಮೂಲಸ್ಥಾನದಿಂದ ಬರುವಾಗಲೇ ಪ್ರಯಾಣಿಕರು ತುಂಬಿಕೊಂಡಿರುತ್ತಾರೆ. ಹಾಗಾಗಿ ಕುಶಾಲನಗರ ಮತ್ತು ಸುಂಟಿಕೊಪ್ಪದಿಂದ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಮಡಿಕೇರಿಗೆ ಹೋಗಲು ಬಯಸುವವರು ಪ್ರಯಾಣಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ಇದೆ.

ಕುಶಾಲನಗರ ಸುತ್ತಮುತ್ತಲಿನ ಪ್ರದೇಶ, ಸುಂಟಿಕೊಪ್ಪ ಭಾಗದಿಂದ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಪ್ರತಿನಿತ್ಯ ಮಡಿಕೇರಿಗೆ ಹೋಗಿ ಬರುತ್ತಾರೆ. ಇದರಲ್ಲಿ ಪುರುಷರದ್ದು ಸಿಂಹಪಾಲು. ಹಣಕೊಟ್ಟು ಟಿಕೆಟ್ ಪಡೆದುಕೊಳ್ಳುವವರಿಗೆ ಬಸ್‌ಗಳಲ್ಲಿ ಶೇ.೫೦ ಸೀಟ್ ಕಾದಿರಿಸಲಾಗುವುದು ಎಂದು ಶಕ್ತಿ ಯೋಜನೆ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹಣಕೊಟ್ಟರೂ ಭರ್ತಿ ಆಗಿರುವ ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣಿಸುವ ಅನಿವಾರ್ಯತೆಯಲ್ಲಿ ಪುರುಷ ಪ್ರಯಾಣಿಕರು ಇದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆ ವಿಭಾಗದಿಂದ ಮೈಸೂರಿನಿಂದ ಕುಶಾಲನಗರ ತನಕ ವೋಲ್ವೊ ಎಸಿ ಬಸ್ ಸೇವೆ ಒದಗಿಸಲಾಗುತ್ತಿದೆ. ಎಕ್ಸ್‌ಪ್ರೆಸ್ ಬಸ್‌ಗಳ ಟಿಕೆಟ್ ದರಕ್ಕಿಂತ ಸ್ವಲ್ಪ ಹೆಚ್ಚು ಟಿಕೆಟ್ ದರ ಇದ್ದರೂ ಆರಾಮದಾಯಕ ಮತ್ತು ನಿಗದಿತ ಅವಧಿಯ ಸಂಚಾರದಿಂದಾಗಿ ಈ ಸೇವೆ ಜನಪ್ರಿಯವಾಗಿದೆ. ಈ ಬಸ್‌ಗಳ ಓಡಾಟವನ್ನು ಮಡಿಕೇರಿ ತನಕವೂ ವಿಸ್ತರಿಸಿದರೆ ಕುಶಾಲನಗರ, ಸುಂಟಿಕೊಪ್ಪ ಹಾಗೂ ಮಡಿಕೇರಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಮೈಸೂರು ಸಬ್‌ಅರ್ಬನ್ ಬಸ್‌ನಿಲ್ದಾಣದಿಂದ ಕುಶಾಲನಗರಕ್ಕೆ ಪ್ರತಿನಿತ್ಯ ಆರು ವೋಲ್ವೋ ಎಸಿ ಬಸ್‌ಗಳು ಓಡಾಡುತ್ತಿವೆ. ಈ ಬಸ್‌ಗಳಲ್ಲಿ ಚಾಲಕನೇ ನಿರ್ವಾಹಕನಾಗಿಯೂ ಕಾರ್ಯನಿರ್ವಹಿಸುತ್ತಾರೆ. ಮೈಸೂರಿನಿಂದ ಕುಶಾಲನಗರಕ್ಕೆ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ೮೩ ರೂ. ಟಿಕೆಟ್ ದರವಿದ್ದರೆ ಈ ವೋಲ್ವೋ ಎಸಿ ಬಸ್‌ಗಳು ೧೦೦ ರೂ. ಟಿಕೆಟ್ ದರವಿದೆ. ಇಲವಾಲ, ಹುಣಸೂರು, ಪಿರಿಯಾಪಟ್ಟಣ, ಬೈಲಕುಪ್ಪೆಯಲ್ಲಿ ಮಾತ್ರ ಸ್ಟಾಪ್ ಕೊಡಲಾಗುತ್ತದೆ.

ಕಳೆದ ೨ ತಿಂಗಳಿನಿಂದ ಈ ವೋಲ್ವೋ ಎಸಿ ಬಸ್‌ಗಳ ಕಡೆಗೆ ಹೆಚ್ಚಿನ ಪ್ರಯಾಣಿಕರು ಆಕರ್ಷಿತರಾಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಆರಾಮವಾಗಿ ಪ್ರಯಾಣ ಮಾಡಲು ಬಯಸುವವರು ವೋಲ್ವೋ ಎಸಿ ಬಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜನದಟ್ಟಣೆ ತಪ್ಪಿಸಿಕೊಳ್ಳಲು ಬಯಸುವ ಮಹಿಳೆಯರೂ ಸುಖದಾಯ ಪ್ರಯಾಣಕ್ಕಾಗಿ ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಈ ವೋಲ್ವೋ ಎಸಿ ಬಸ್‌ಗಳ ಸಂಚಾರವನ್ನು ಮಡಿಕೇರಿ ತನಕ ವಿಸ್ತರಿಸಿದರೆ ಕುಶಾಲನಗರ, ಸುಂಟಿಕೊಪ್ಪ ಸುತ್ತಲಿನ ಪ್ರಯಾಣಿಕರಿಗೆ ಮಡಿಕೇರಿ ತೆರಳಲು ಹೆಚ್ಚಿನ ಅನುಕೂಲ ಆಗಲಿದೆ. ಇಷ್ಟು ಮಾತ್ರವಲ್ಲದೆ ಮಡಿಕೇರಿ, ಸುಂಟಿಕೊಪ್ಪ ಭಾಗದಿಂದ ಮೈಸೂರಿಗೆ ಹೋಗಲು ಮತ್ತು ಮೈಸೂರಿನಿಂದ ಸುಂಟಿಕೊಪ್ಪ, ಮಡಿಕೇರಿ ಕಡೆಗೆ ಬರುವವರಿಗೂ ತುಂಬಾ ಪ್ರಯೋಜನ ಆಗಲಿದೆ. ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆ ವಿಭಾಗದ ಈ ವೋಲ್ವೋ ಬಸ್‌ಗಳು ರಾಜಹಂಸಕ್ಕಿಂತಲೂ ಕಡಿಮೆ ದರದಲ್ಲಿ ಎಸಿ ಬಸ್‌ನ ಆರಾಮದಾಯಯಕ ಪ್ರಯಾಣದ ಅನುಭವವನ್ನು ಕೊಡುವುದರಿಂದ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲಿದೆ. ಸಂಸ್ಥೆಗೆ ಉತ್ತಮ ಆದಾಯವೂ ಸಿಗಲಿದೆ.

ಸದ್ಯ ಬೆಳಗ್ಗೆ ೮.೧೫, ೯, ೧೦, ೧೦.೪೫, ೧೧.೧೫, ಮಧ್ಯಾಹ್ನ ೧೨, ೧೨.೩೫, ಮಧ್ಯಾಹ್ನ ೧.೨೦, ೨.೨೦, ೩.೦೫, ಮಧ್ಯಾಹ್ನ ೩.೩೫, ೪.೨೦, ೫.೨೦ ಹಾಗೂ ೭.೨೦ಕ್ಕೆ ಮೈಸೂರಿನಿಂದ ಕುಶಾಲನಗರಕ್ಕೆ ಬಸ್ ಸಂಚಾರ ಇದೆ.
ಕುಶಾಲನಗರದಿಂದ ಮೈಸೂರಿಗೆ ಬೆಳಗ್ಗೆ ೭, ೮, ೮.೫೦, ೧೦.೧೫, ೧೧.೨೦, ಮಧ್ಯಾಹ್ನ ೧೨, ೧೨.೪೫, ಮಧ್ಯಾಹ್ನ ೧.೧೫, ೨.೨೦, ಮಧ್ಯಾಹ್ನ ೩, ೩.೩೦, ೪.೩೦, ೫.೩೫, ೫.೦೫ ಹಾಗೂ ಸಂಜೆ ೬.೩೦ಕ್ಕೆ ವೋಲ್ವೋ ಎಸಿ ಬಸ್‌ಗಳು ಇದೆ.