ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮುತ್ತಿನಹಾರ ವಾದ್ಯಗೋಷ್ಠಿ ಕಲಾವಿದರ ಸಂಘದಿಂದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿತ ಸಂಘದ ಪ್ರಥಮ ವಾರ್ಷಿಕೋತ್ಸವ ಸಂದರ್ಭ ಸೆಸ್ಕ್ ಸಿಬ್ಬಂದಿ ಪ್ರಶಾಂತ್ ಮಾಲಿ, ಕೆಎಸ್‌ಆರ್‌ಟಿಸಿ ಚಾಲಕ ವಿ.ಜಿ. ನಾರಾಯಣ, ಅಂಚೆ ಇಲಾಖೆ ಸಿಬ್ಬಂದಿ ಪಿ.ಎಂ. ಪೊನ್ನಮ್ಮ, ವಿಕಾಸ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಕೆ. ರಮೇಶ್ ಅವರನ್ನು ಸನ್ಮಾನಿಸಲಾ ಯಿತು.
ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಮನಸ್ಸಿನಲ್ಲಿ ಭಾವನೆ ಅರಳಿಸುವ, ಹೃದಯಕ್ಕೆ ನಾಟುವಂತೆ ಮಾಡುವ ಅಪೂರ್ವ ಶಕ್ತಿ ಸಂಗೀತಕ್ಕಿದೆ ಎಂದರು. ಭಕ್ತಿ, ಪ್ರೇಮ, ಭಾವನೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಹಾಡುಗಳು ಹೃದಯ ತಟ್ಟಬಲ್ಲವು ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾತಂಡಗಳು ಕಂಡು ಬರುತ್ತಿ
ರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಮಡಿಕೇರಿಯಲ್ಲಿಯೂ ಹೆಚ್ಚಿನ ಸಾಂಸ್ಕತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟು ಕಲಾಪ್ರೇಮಿಗಳಿಗೆ ತಲುಪಬೇಕೆಂದರು.
ಆರ್ಯಭಟ ಪ್ರಶಸ್ತಿ ವಿಜೇತ ಕಲಾವಿದ ರವಿ ಸಂತೋಷ್ ಮಾತನಾಡಿ, ಹಳೆಯ ಕಾಲದ ವಾದ್ಯಪರಿಕರಗಳ ಅರಿವು ಅನೇಕರಲ್ಲಿ ಇರುವು ದಿಲ್ಲ. ಆಧುನಿಕ ಶೈಲಿಯ ಹಾಡುಗಾರರು ಹಳೆಯ ಹಾಡುಗಳ ಮಾಧುರ್ಯಕ್ಕೆ ಕಾರಣವಾಗುತ್ತಿದ್ದ ಪುರಾತನ ಕಾಲದ ಜಾನಪದೀಯ ವಾದ್ಯ ಪರಿಕರಗಳ ಮಹತ್ವ ಮರೆಯಬಾರದೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಕಲಾವಿದರು ಇನ್ನೂ ಸಂಕಷ್ಟದಿಂದ ಹೊರಬಂದಿಲ್ಲ. ಸಾಂಸ್ಕೃತಿಕ ಪ್ರತಿಭೆಯಿದ್ದರೂ ಸೂಕ್ತ ವರಮಾನ ತರುವ ವೃತ್ತಿಯಿಲ್ಲದೇ ಹೋದರೆ ಸಂಗೀತಗಾರನ ಜೀವನ ಒಪ್ಪತ್ತಿನ ಊಟಕ್ಕೂ ಪರದಾಡುವಂತಿರುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ವಿದ್ಯಾರ್ಥಿಗಳು ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದಾರೆ. ಮುತ್ತಿನಹಾರ ಸಾಂಸ್ಕೃತಿಕ ಸಂಘಟನೆ ಮೂಲಕ ಗ್ರಾಮಾಂತರ ಪ್ರದೇಶದ ೪೦ ಕ್ಕೂ ಅಧಿಕ ಗಾಯಕರು ಒಟ್ಟಾಗಿರುವುದು ಶ್ಲಾಘನೀಯ. ಕೊಡಗಿನ ಕಲಾತಂಡವಾಗಿ ರಾಜ್ಯಮಟ್ಟದಲ್ಲಿ ಬೆಳೆಯಬೇಕೆಂದರು.
ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ ಮಾತನಾಡಿ, ಕಲಾವಿದರನ್ನು ಒಗ್ಗೂಡಿಸಲು ಮುಂದಾಗಿರುವ ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ಪ್ರಯತ್ನ ಮಾದರಿಎಂದರು.
ಪತ್ರಕರ್ತ ಚೇತನ್ ರಾಜ್, ಮುತ್ತಿನಹಾರ ವಾದ್ಯಗೋಷ್ಠಿ ಕಲಾವಿದರ ಸಂಘ ಅಧ್ಯಕ್ಷ ಸುಭಾಷ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಜಿ ಪರಮೇಶ್, ಉಪಾಧ್ಯಕ್ಷ ಸತೀಶ್, ಗೌರವ ಸಲಹೆಗಾರ ಪಿ.ರವಿ ಹಾಜರಿದ್ದರು. ಸಂಜೆಯಿಂದ ರಾತ್ರಿಯವರೆಗೂ ಕೊಡಗಿನ ೪೦ ಗಾಯಕರು ಗಾಂಧಿ ಮೈದಾನದ ಬಯಲು ರಂಗಮಂದಿರದಲ್ಲಿ ವೈವಿಧ್ಯಮಯ ಗಾಯನ ಮೂಲಕ ಕಲಾಪ್ರೇಮಿಗಳ ಮನರಂಜಿಸಿದರು. ಪ್ರತಿಮಾ ಹರೀಶ್ ರೈ, ಕೆ.ಕೆ. ಜಯಲಕ್ಷ್ಮಿ ನಿರೂಪಿಸಿದರು.