ಮಡಿಕೇರಿ: ಜಿಲ್ಲೆಯ ಮಹಾತ್ಮಗಾಂಧಿ ಗ್ರಂಥಾಲಯ ಎಂದು ಕರೆಯಲ್ಪಡುತ್ತಿದ್ದ ಜಿಲ್ಲಾ ಗ್ರಂಥಾಲಯಕ್ಕೆ ಜೂ.5ರಂದು ಚಾಲನೆ ಸಿಗಲಿದೆ.
ಭಾರತೀಯ ಪುರಾತತ್ವ ಇಲಾಖೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದೊಳಗಿನ ಎಲ್ಲ ಕಚೇರಿಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆ ಕೋಟೆ ಆವರಣದಲ್ಲಿದ್ದ ಜಿಲ್ಲಾ ಗ್ರಂಥಾಲಯವನ್ನು ಬೇರೆಡೆ ಸ್ಥಳಾಂತರಗೊಳಿಸುವಂತೆ ಸೂಚನೆ ನೀಡಲಾಗಿತ್ತು.
ಇದರಿಂದ ಸುಮಾರು 6-7 ತಿಂಗಳಿಂದ 87 ಲಕ್ಷ ವೆಚ್ಚದಲ್ಲಿ ಜಿಲ್ಲಾ ಗ್ರಂಥಾಲಯದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿತ್ತು. ಇದೀಗ ಗ್ರಂಥಾಲಯಕ್ಕೆ ಉದ್ಘಾಟನೆ ಭಾಗ್ಯ ಲಭ್ಯವಾಗಿದ್ದು, ಜೂ.5ರಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ.
87 ಲಕ್ಷ ಅನುದಾನ: ನಗರದ ಕೈಗಾರಿಕಾ ಬಡಾವಣೆಯಲ್ಲಿ ಗ್ರಂಥಾಲಯ ಪ್ರಾಧಿಕಾರ ನಿಧಿಯಿಂದ 87 ಲಕ್ಷ ರೂ ಅನುದಾನದಲ್ಲಿ ಕಾಮಗಾರಿ ನಡೆದಿದೆ. ನೂತನ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಜುಲೈ ಒಳಗೆ ಮುಗಿಸುವ ಗುರಿಯನ್ನು ಹೊಂದಲಾಗಿತ್ತಾದರೂ ಜೂನ್ ಮೊದಲ ವಾರದಲ್ಲೇ ಕಾಮಗಾರಿ ಪೂರ್ಣಗೊಳಿಸಿ, ಓದುಗರಿಗೆ ಲಭ್ಯವಾಗುವಂತೆ ಮಾಡಿದ್ದಾರೆ.
ಪುಸ್ತಕ ಸ್ಥಳಾಂತರ: ಹಳೆ ಗ್ರಂಥಾಲಯದಲ್ಲಿರುವ ಪುಸ್ತಕ, ಸಾಮಗ್ರಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯವು ನಡೆಯುತ್ತಿದೆ. ಕರೊನಾ ಹಿನ್ನೆಲೆ ಜಾರಿಯಾಗಿರುವ ಲಾಕ್‌ಡೌನ್ ಕಳೆದ ನಂತರ ಓದುಗರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಗ್ರಂಥಾಲಯಾಧಿಕಾರಿ ಎನ್.ಲೀಲಾವತಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.