ಮಡಿಕೇರಿ: ಅಕ್ಷರಗಳು ಕಾಗದ ಮತ್ತು ಲೇಖನಿಯಿಂದ ದೂರವಾಗಿ ಸಾಮಾಜಿಕ ಜಾಲತಾಣ ಆವರಿಸಿಕೊಳ್ಳುತ್ತಿರುವುದರಿಂದ ಭಾಷೆಯ ಮೌಲ್ಯ ಹಾಗೂ ಶುದ್ಧತೆ ಮರೆಯಾಗುತ್ತಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೫೮ನೇ ಕೃತಿಯಾಗಿ ಉಡುವೆರ ರಾಜೇಶ್ ಉತ್ತಪ್ಪ ಬರೆದಿರುವ ಕೋಲೆಲ್ಲಿಯಾ… ಅನ್ನು ಬುಧವಾರ ಪತ್ರಿಕಾ ಭವನದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಇಂದು ಸಾಹಿತ್ಯ ಕೃತಿಗಳ ರೂಪ ಪಡೆದುಕೊಳ್ಳದೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗುತ್ತಿದೆ. ಇತಿಮಿತಿ ಇಲ್ಲದ ಅಕ್ಷರಗಳ ಬಳಕೆಯಿಂದ ಭಾಷೆ ಕಲುಷಿತಗೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಭಾಷೆಯ ಮೌಲ್ಯ ಸಂಪೂರ್ಣವಾಗಿ ಕ್ಷೀಣಗೊಳ್ಳಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಅನ್ನದಾನ, ವಿದ್ಯಾ ದಾನದಂತೆ ಪುಸ್ತಕಗಳ ಪ್ರಕಟಣೆಯೂ ಜ್ಞಾನ ದಾನವಾಗಿದೆ. ೧೨೨ ವರ್ಷ ಸಾಹಿತ್ಯ ಇತಿಹಾಸ ಹೊಂದಿರುವ ಕೊಡವ ಸಾಹಿತ್ಯ ಕ್ಷೇತ್ರ ಇಲ್ಲಿಯವರೆಗೆ ಕೇವಲ ೫೦೦ ರಿಂದ ೬೦೦ ಪುಸ್ತಕಗಳನ್ನಷ್ಟೇ ಹೊರ ತರಲು ಸಾಧ್ಯವಾಗಿದೆ. ೧,೯೦೦ ರಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕ ಅವರು ನಾಟಕ ರಚನೆ ಮೂಲಕ ಕೊಡವ ಸಾತ್ಯಕ್ಕೆ ನಾಂದಿ ಹಾಡಿದರು. ೧೯೭೮ ರ ನಂತರ ಕೊಡವ ಭಾಷೆ ಹಾಗೂ ಸಾಹಿತ್ಯದ ಕುರಿತು ಜಾಗೃತಿ ಹೆಚ್ಚಾಯಿತ್ತೆಂದರು.
ಕೊಡವ ಪುಸ್ತಕೋದ್ಯಮ ಲಾಭವಿಲ್ಲದ ಒಂದು ಕ್ಷೇತ್ರ. ಆದರೂ ದಾನಿಗಳ ನೆರವಿನೊಂದಿಗೆ ಜ್ಞಾನ ದಾನದಲ್ಲಿ ಸಕ್ರಿಯವಾಗಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಿಜಿರ ಬಿ.ಅಯ್ಯಪ್ಪ ಅವರ ಕಾರ್ಯ ಶ್ಲಾಘನೀಯ ಎಂದು ಪೂವಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಜನರಿಗೆ ಉಪಯೋಗವಾಗುವಂತಹ ಸತ್ವಯುತ ಮತ್ತು ಮೌಲ್ಯಯುತ ಪುಸ್ತಕಗಳನ್ನು ಸಾಹಿತ್ಯಾಸಕ್ತರು ಕೇಳಿ ಪಡೆಯುತ್ತಾರೆ. ಈ ರೀತಿಯ ಪುಸ್ತಕಗಳು ಹೊರ ಬರಬೇಕೆ ಹೊರತು ಕೇವಲ ಸಂಖ್ಯಾಬಲ ಮತ್ತು ಸನ್ಮಾನಕ್ಕಾಗಿ ಬಿಡುಗಡೆಗೊಳಿಸಬಾರದೆಂದರು.
ಅನೇಕರ ಮನೆಗಳಲ್ಲಿ ಪುಸ್ತಕಗಳಿರುತ್ತವೆ. ಆದರೆ, ಓದುವ ಹವ್ಯಾಸ ಇರುವುದಿಲ್ಲ. ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ, ಇತ್ತೀಚಿನ ದಿನಗಳಲ್ಲಿ ಚರಿತ್ರೆ ತಿರುಚುವ ಕಾರ್ಯವಾಗುತ್ತಿದೆ. ಕೊಡಗಿನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೂ ಇವರುಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಹೀರಾತಿನಲ್ಲಿ ಉಲ್ಲೇಖಲ್ಲ. ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸಾಹಿತ್ಯ ರಚನೆಯಾಗದೆ ಇರುವುದು ಇದಕ್ಕೆ ಕಾರಣವೆಂದರು.
ಸಮಾಜ ಸೇವಕ ಚೆರುಮಾಡಂಡ ಸತೀಶ್ ಸೋಮಣ್ಣ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಆ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಜಾನಪದ ಕಲಾ ಪ್ರಕಾರಗಳ ತರಬೇತಿ ಮೂಲಕ ಯುವ ಜನರಿಗೆ ಕಲಿಸುತ್ತಾ ಬರುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ದಕ್ಷಿಣ ಭಾರತದ ಮೊದಲ ಜಾನಪದ ಕೃತಿ ಪಟ್ಟೋಲೆ ಪಳಮೆ ಹಂಚುತ್ತಿದೆ. ಆ ಮೂಲಕ ಕೊಡವ ಸಂಸ್ಕೃತಿ ಬೆಳವಣಿಗೆಗೂ ಕಾರಣವಾಗಿದೆ ಎಂದರು. ಬರಹಗಾರ ಉಡುವೆರ ರಾಜೇಶ್ ಉತ್ತಪ್ಪ, ಸಮಾಜ ಸೇವಕಿ ಮುಕ್ಕಾಟೀರ ಅಂಜು ಸುಬ್ರಮಣಿ ಇದ್ದರು.