ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯಲ್ಲಿ ಜ.೨೮ ರಂದು ಆಯೋಜಿಸಿರುವ ೧೧ನೇ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗ ಮುಖ್ಯಸ್ಥ ಡಾ.ವಿಜಯ್ ಪೂಣಚ್ಚ ತಂಬಂಡ ಆಯ್ಕೆ ಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಪುದಿಯನೆರವನ ರಿಶಿತ್ ಮಾದಯ್ಯ, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್, ತುಳಸಿ ಮೋಹನ್, ಸಂಘಟನಾ ಕಾರ್ಯದರ್ಶಿ ತಳೂರು ದಿನೇಶ್, ಸಮ್ಮೇಳನದ ಮೇಲುಸ್ತುವಾರಿ ಸದಸ್ಯ ಚಂದ್ರಶೇಖರ್, ನಿರ್ದೇಶಕರಾದ ಶ್ರೀಧರ್, ಹರೀಶ್ ಸರಳಾಯ, ಮಂಜುನಾಥ್, ಅಬ್ದುಲ್ಲಾ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಡಾ.ವಿಜಯ್ ಪೂಣಚ್ಚ ಪರಿಚಯ
ಡಾ.ವಿಜಯ್ ಪೂಣಚ್ಚ ಅವರು ೨೬ ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮೇಕ್ ಅರ್ಥರ್ ಫೌಂಡೇಶನ್ಸ್, ಯುನೆಸ್ಕೊ, ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಾಂಡಿಚೇರಿಯಿಂದ ಕೈಗೊಂಡ ಬಯೋಡೈವರ್ಸಿಟಿ ಆಫ್ ವೆಸ್ಟರ್ನ್ ಘಾಟ್ಸ್ ಎನ್ನುವ ಯೋಜನೆಯಲ್ಲಿ ಸಮಾಜ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕಾಮನ್ ವೆಲ್ತ್ ಫೆಲೋ ಆಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆ ಮಾಡಿದ್ದಾರೆ. ಸಮಾಜ ವಿಜ್ಞಾನಗಳ ಪಠ್ಯಪುಸ್ತಕಗಳ ಪಠ್ಯರಚನೆಯ ಕರಿಕ್ಯುಲಂ ಸಮಿತಿ ಅಧ್ಯಕ್ಷ, ೮ನೇ ತರಗತಿಯ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ, ೧೦ನೇ ತರಗತಿಗೆ ೧೮೩೭ರ ಅಮರಸುಳ್ಯ ಸಂಗ್ರಾಮ ಎನ್ನುವ ಪಠ್ಯದ ಲೇಖಕರಾಗಿ ಕಾರ್ಯನಿರ್ವಹಣೆ, ಕನ್ನಡ ವಿಶ್ವವಿದ್ಯಾಲಯದ ಡೀನ್, ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚರಿತ್ರೆ ವಿಶ್ವಕೋಶ, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳು, ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್, ಚರಿತ್ರೆ ಅಧ್ಯಯನಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೊಡಗಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ಕೃತಿಗಳ ಪ್ರಕಟಿಸಿದ್ದಾರೆ. ೨೦೦೭ ರಲ್ಲಿ ಅಮರಸುಳ್ಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಆಯೋಜನೆ ಮಾಡಿದ್ದಾರೆ.