ವಿಜಯವಾಣಿ ಸುದ್ದಿಜಾಲ ಮಡಿಕೇರಿ
ದೇಶ ಕಾಯುವ ಕಾಯಕದಲ್ಲಿ ತ್ಯಾಗ- ಬಲಿದಾನ ಮಾಡಿರುವ ಕೊಡಗಿನ ಯೋಧರು ದೇಶಕ್ಕೆ ಸ್ಫೂರ್ತಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೆಆರ್‌ಎಸ್ ಪಕ್ಷ ೧೩ ದಿನ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗುರುವಾರ ಕೊಡಗಿಗೆ ಆಗಮಿಸಿದ್ದ ಅವರು ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಭಾರತೀಯ ಸೇನೆಯ ಮಹಾದಂಡ ನಾಯಕರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಭೂಸೇನೆ ಮುಖ್ಯಸ್ಥರಾಗಿ ಜನರಲ್ ಕೆ.ಎಸ್. ತಿಮ್ಮಯ್ಯ ಅಪಾರ ಕೊಡುಗೆ ನೀಡಿದ್ದಾರೆ. ಕೊಡಗಿನ ಸಹಸ್ರಾರಾರು ಯೋಧರು ದೇಶ ಕಾಯುವ ಕಾಯಕ ಮಾಡಿದ್ದಾರೆ. ವೀರತ್ವ, ದೇಶಭಕ್ತಿ ಗೆ ಕೊಡಗಿನವರು ಪ್ರಖ್ಯಾತಿ ಹೊಂದಿದ್ದಾರೆ. ದೇಶಕ್ಕಾಗಿ ತ್ಯಾಗ- ಬಲಿದಾನ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕುಶಾಲನಗರದಲ್ಲಿ ಕಾವೇರಿ ಮಾತೆಗೆ ನಮಿಸಿ ಕೊಡಗು ಪ್ರವೇಶಿಸಿದ್ದೇವೆ. ಕೊಡಗಿನ ಗೌರಮ್ಮ ಇದ್ದ ಗುಂಡುಕುಟ್ಟಿ ಎಸ್ಟೇಟ್‌ಗೆ ಭೇಟಿ ನೀಡು ವುದರ ಮೂಲಕ ಗೌರಮ್ಮ ಅವರಿಗೆ ಗೌರವ ಸಲ್ಲಿಸಿದ್ದೇವೆ. ಮಹಾತ್ಮ ಗಾಂಧೀಜಿ ತಮ್ಮ ಬಳಿ ಬರಬೇಕೆಂದು ಉಪವಾಸ ಸತ್ಯಾಗ್ರಹ ಮಾಡುವು ದರ ಮೂಲಕ ಕೊಡಗಿನ ಗೌರಮ್ಮ ಗಮನ ಸೆಳೆದಿದ್ದರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ರಾಜ್ಯ ರಾಜಕರಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾಡ ಪ್ರೇಮಿಗಳು ಸಕ್ರಿಯ ರಾಜಕೀಯಕ್ಕೆ ಬರಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಎಲ್ಲಾ ಸ್ಥಾನಕ್ಕೂ ಸ್ಪರ್ಧಿಸಲಿದ್ದಾರೆಂದು ರವಿ ಕೃಷ್ಣಾರೆಡ್ಡಿ ಹೇಳಿದರು.
ನಾಡು- ನುಡಿಗಾಗಿ ನಾಡಿನಾದ್ಯಂತ ಕೆಆರ್‌ಎಸ್ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಸಂಚರಿಸುತ್ತಿರುವುದು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಭಾಷೆ- ಪರಂಪರೆಗೆ ಭವ್ಯ ಇತಿಹಾಸವಿದೆ. ಭಾಷೆ ಬಗ್ಗೆ ಪ್ರತಿಯೊಬ್ಬರು ಹೆಮ್ಮೆ- ಅಭಿಮಾನ ಇಟ್ಟುಕೊಳ್ಳಬೇಕು. ಎಲ್ಲಾ ಭಾಷೆಯನ್ನು ಪ್ರೀತಿಸಬೇಕೆಂದು ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ವೈದ್ಯ ಡಾ.ಕುಶ್ವಂತ್ ಕೋಳಿಬೈಲು ಹೇಳಿದರು.
ಕೆಆರ್‌ಎಸ್ ಪಕ್ಷದ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸ್ವರಚಿತ ಕನ್ನಡ ಕವನವನ್ನು ಇದೇ ಸಂದರ್ಭ ವಾಚಿಸಿದರು. ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆ, ವೈದ್ಯರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಲ್ಲಿಸುತ್ತಿರುವ ಸೇವೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ರುವುದಕ್ಕೆ ಡಾ.ಕುಶ್ವಂತ್ ಕೋಳಿಬೈಲು ಅವರಿಗೆ ರವಿಕೃಷ್ಣಾರೆಡ್ಡಿ ಮಾಲಾರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಕೆಆರ್‌ಎಸ್ ಪ್ರಮುಖರಾದ ಪೊನ್ನಮ್ಮ ಕಾಳಪ್ಪ, ಪ್ರಸನ್ನ, ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಶಶಾಂಕ್ ಮತ್ತಿತರರು ಇದ್ದರು.