ಮಡಿಕೇರಿ: ಸಿದ್ದರಾಮಯ್ಯ ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗದೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ವೈಫಲ್ಯ ತೋರಿಸಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಆರೋಪಿಸಿದ್ದಾರೆ.
ಎಸ್ಪಿ ದಕ್ಷ ಅಧಿಕಾರ ಇರಬಹುದು. ಅವರನ್ನು ವರ್ಗಾವಣೆ ಮಾಡಿ, ಇಲ್ಲಿಯೇ ಉಳಿಸಿಕೊಳ್ಳಿ ಎಂದು ನಾವು ಹೇಳಿಲ್ಲ. ಆದರೂ, ಆ.೧೮ ರಂದು ನಡೆದ ಘಟನಾವಳಿಗಳು ಎಸ್ಪಿ ವೈಫಲ್ಯ ಎತ್ತಿತೋರಿಸುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಿತಿಮತಿ, ಮಡಿಕೇರಿಯಲ್ಲಿ ಗಲಾಟೆ ಸಂಭವಿಸಿದ ಬಳಿಕ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿತ್ತು. ತದನಂತರ ಗುಡ್ಡೆಹೊಸೂರು, ಶನಿವಾರಸಂತೆಯಲ್ಲಿಯೂ ಆಹಿತಕರ ಘಟನೆ ನಡೆದಿದೆ. ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಡಿವೈಎಸ್ಪಿ, ಸಿಐ, ಎಸ್‌ಐ ಯಾರೊಬ್ಬ ಅಧಿಕಾರಿಯೂ ಇರಲಿಲ್ಲ. ಪೊಲೀಸ್ ಅಧಿಕಾರಿಗಳು ಏಕೆ ತಮ್ಮ ಪಾಲಿನ ಕೆಲಸ ಮಾಡಿಲ್ಲ. ಜಾತಿ, ಧರ್ಮ ಅಧಿಕಾರಿಗೆ ಸಂಬಂಧವಿಲ್ಲ. ತಮ್ಮ ಪಾಲಿನ ಕೆಲಸ ಮಾಡಬೇಕಾಗಿತ್ತೆಂದರು.
ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮಾಂಸಹಾರ ಊಟ ಸೇವಿಸಿಲ್ಲ.ಊಟದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಕುಡಿದು ದೇವಸ್ಥಾನಕ್ಕೆ ಹೋಗುತ್ತಾರೆ. ಅತ್ಯಾಚಾರ ಮಾಡಿ ದೇವಸ್ಥಾನಕ್ಕೆ ಹೋಗುತ್ತಾರೆ. ಶಾಸಕರು, ಸಂಸದರು ಒಳ್ಳೆಯ ರೀತಿ ಮಾತನಾಡಲಿ. ಕೊಡಗಿನ ಮರ್ಯಾದೆ ಕಾಪಾಡಲು ಇವರಿಗೆ ಗೊತ್ತಿಲ್ಲ ಎಂದು ಚಂದ್ರಕಲಾ ಟೀಕಿಸಿದರು.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುರಯ್ಯ ಅಬ್ರಾರ್, ಕುಶಾಲಗನರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುನೀತಾ ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭು ರೈ ಗೋಷ್ಠಿಯಲ್ಲಿದ್ದರು.