ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಜಾತ್ಯಾತೀತ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರು ಜೆಡಿಎಸ್ ಮುಖಂಡ ನಾಪಂಡ ಎಂ. ಮುತ್ತಪ್ಪ ಅವರಿಗೆ ಶುಭ ಹಾರೈಸಿದ್ದಾರೆ.
ಆ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಪಂಡ ಮುತ್ತಪ್ಪ ಸ್ಪರ್ಧೆ ಮತ್ತಷ್ಟು ಖಚಿತಗೊಂಡಿದೆ. ಶನಿವಾರ ಬೆಂಗಳೂರು ನಿವಾಸಕ್ಕೆ ಭೇಟಿ ನೀಡಿದ ವೇಳೆ ಪಕ್ಷ ಸಂಘಟನೆ ಹಾಗೂ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ನಾಯಕರು ಸಮಾಲೋಚನೆ ನಡೆಸಿದರು.
೨೦೨೩ರ ವಿಧಾನಸಭಾ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಎಂ. ಮುತ್ತಪ್ಪ ಕುರಿತ ವ್ಯಕ್ತಿ ಪರಿಚಯವುಳ್ಳ ಪುಸ್ತಕ ಬಿಡುಗಡೆಗೊಳಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರು ಮುಂದಿನ ಚುನಾವಣಾ ಸಿದ್ದತೆಗಳ ಕುರಿತು ಚರ್ಚಿಸಿದರು. ಚುನಾವಣಾ ಪ್ರಚಾರಕ್ಕೆ ಕೊಡಗಿಗೆ ಬರುವುದಾಗಿ ಭರವಸೆ ನೀಡಿ, ಗೆದ್ದು ಬರುವಂತೆ ಹಾರೈಸಿದರು.
ಈ ಸಂದರ್ಭ ನಾಪಂಡ ಮುದ್ದಪ್ಪ, ಹೊಸಬೀಡು ಹೂವಯ್ಯ, ಕಿತ್ತೂರು ಗಿರೀಶ್, ಬಿ.ಕಿಶೋರ್ ಕುಮಾರ್, ಸರ್ಕಲ್ ಮಂಜ, ಚೇತನ್, ಉಜ್ಜನಿ ನಾಗೇಂದ್ರ, ಜಗತ್ ಬೋಪಣ್ಣ, ಹಿರಿಯರಾದ ರಾಜೇಶ್ ಬಾಬು, ಸಿನಿಮಾ ನಿರ್ಮಾಪಕ ಚಂದ್ರಶೇಖರ ರೆಡ್ಡಿ ಮತ್ತಿತರರು ಇದ್ದರು.
ನಾಪಂಡ ಎಂ. ಮುತ್ತಪ್ಪ ಅವರ ಪರಿಚಯ ಪುಸ್ತಕದ ೧ ಲಕ್ಷ ಪ್ರತಿ ಮುದ್ರಿಸಲಾಗಿದ್ದು, ಕ್ಷೇತ್ರದ ಪ್ರತಿ ಮನೆಗೂ ತಲುಪಿಸಲಾಗುವುದೆಂದು ಜೆಡಿಎಸ್ ಮುಖಂಡ ನಾಪಂಡ ಮುದ್ದಪ್ಪ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.