ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಸೆಳೆಯಲಾಗುವುದೆಂದು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ದಸರಾ ಪೂರ್ವಭಾವಿ ಸಭೆ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು. ಸೋಮವಾರ ಕೊಡಗಿನ ಶಾಸಕರೊಂದಿಗೆ ಸಿಎಂ ಭೇಟಿ ಮಾಡಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಲಾಗುವು ದೆಂದರು.
ಮಡಿಕೇರಿಗೆ ೧ ಕೋಟಿ, ಗೋಣಿಕೊಪ್ಪಕ್ಕೆ ೫೦ ಲಕ್ಷ ರೂ. ಮಂಜೂರು ಮಾಡಲಾಗಿದೆ. ಮಡಿಕೇರಿಗೆ ೩೬.೩೦ ಲಕ್ಷ, ಗೋಣಿಕೊಪ್ಪಕ್ಕೆ ೧೦ ಲಕ್ಷ ರೂ. ಹೆಚ್ಚುವರಿ ಕೇಳಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಸಿಎಂ ಗಮನಕ್ಕೆ ತಂದು ಮನವರಿಕೆ ಮಾಡಿಕೊಡುವ ಮೂಲಕ ಹೆಚ್ಚುವರಿ ಅನುದಾನ ಪಡೆಯಲಾಗುವುದೆಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಮಡಿಕೇರಿ ದಸರಕ್ಕೆ ೧.೩೬ ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ. ಹೆಚ್ಚುವರಿಯಾಗಿರುವ ೩೬.೩೦ ಲಕ್ಷ ರೂ. ಸರ್ಕಾರ ದಿಂದ ಒದಗಿಸಿಕೊಡಬೇಕೆಂದು ಮಡಿಕೇರಿ ನಗರ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಪೂರ್ವಭಾವಿ ಸಭೆಯಲ್ಲಿ ಸಚಿವರ ಗಮನ ಸೆಳೆದರು. ಮಡಿಕೇರಿ ದಸರಕ್ಕೆ ಬಗ್ಗೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾಹಿತಿ ನೀಡಿದರು.
ಗೋಣಿಕೊಪ್ಪ ದಸರಕ್ಕೆ ೬೦ ಲಕ್ಷ ರೂ. ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಹೆಚ್ಚುವರಿಯಾಗಿ ೧೦ ಲಕ್ಷ ರೂ. ಬಿಡುಗಡೆ ಮಾಡು ವಂತೆ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮನವಿ ಮಾಡಿದರು. ವಿಜಯದಶಮಿಯಂದು ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಸಾಧನೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ರಸ್ತೆ ಸರಿ ಪಡಿಸಬೇಕು. ವಿದ್ಯುತ್ ಸಮಸ್ಯೆ ಪರಿಹರಿಸಬೇಕು. ಎಲ್ಲೆಡೆ ವಿದ್ಯುತ್ ಬಲ್ಬ್ ಹಾಕಬೇಕೆಂದು ಸಚಿವರು, ಶಾಸಕರು ಸೂಚನೆ ನೀಡಿ ದರು.
ಮಡಿಕೇರಿಯಲ್ಲಿ ಮಂಟಪಗಳು ನಿಗದಿತ ಸಮಯದಲ್ಲಿ ಪ್ರದರ್ಶನ ನೀಡಬೇಕು. ಗ್ಯಾಸ್ ಬಳಕೆ ಮಾಡುವುದರಿಂದ ಸೆಸ್ಕ್, ಅಗ್ನಿಶಾಮಕ ದಳ ದಿಂದ ಎನ್‌ಒಸಿ ಪಡೆದುಕೊಳ್ಳಬೇಕೆಂದು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಹೇಳಿದರು. ಬನ್ನಿ ಕಡಿಯಲು ವಿಳಂಬ ಮಾಡುವುದು, ಪ್ರದರ್ಶನ ಬಳಿಕೆ ಮಂಟಪಗಳನ್ನು ಬಿಚ್ಚುವುದು ಸಂಚಾರ ವ್ಯವಸ್ಥೆಗೆ ತೊಡಕಾಗುತ್ತಿದೆ ಎಂದು ಗಮನ ಸೆಳೆದರು.
ಹೊಸ ರೀತಿ- ನೀತಿಗೆ ಶಾಸಕ ಕೆ.ಜಿ. ಬೋಪಯ್ಯ ಆಕ್ಷೇಪ ವ್ಯಕ್ತ ಪಡಿಸಿದರು. ಈ ಹಿಂದಿನಂತೆ ನಡೆಯಲಿ ಎಂದು ಸೂಚನೆ ನೀಡಿದರು. ಸೆಸ್ಕ್
, ಅಗ್ನಿಶಾಮಕದಳದಿಂದ ಅನುಮತಿ ನೀಡಲು ನಗರಸಭೆಯಲ್ಲಿ ವ್ಯವಸ್ಥೆ ಮಾಡುವಂತೆ ಸಚಿವರು ಸೂಚನೆ ನೀಡಿದರು.
ವೇದಿಕೆಯಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಇದ್ದರು.
ಮದ್ಯ ಮಾರಾಟಕ್ಕೆ ಅವಕಾಶ
ದಸರದಂದು ಮದ್ಯ ಮಾರಾಟ ನಿಷೇಧಿಸದ್ದಂತೆ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳುವುದರ ಮೂಲಕ ಸ್ವಾರಸ್ಯಕರ ಚರ್ಚೆ ನಡೆಯಿತು. ಮದ್ಯ ಮಾರಾಟ ನಿಷೇಧ ಮಾಡುವುದರಿಂದ ಹೊರಗೆ ಹೆಚ್ಚು ಕುಡಿದು ಬರುತ್ತಾರೆ. ಇದರ ಬದಲು ಎಂದಿನಂತೆ ಮದ್ಯ ಮಾರಾಟ ಮಾಡುವುದರಿಂದ ತೊಂದರೆ ಆಗುವುದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದರು.
ಹಲವು ವರ್ಷಗಳ ಕಾಲ ಮದ್ಯ ಮಾರಾಟ ನಿಷೇಧಿಸಿರಲಿಲ್ಲ ಎಂದು ಜನಪ್ರತಿನಿಧಿಗಳು ಗಮನ ಸೆಳೆದರು. ಈ ಹಿಂದಿನಂತೆ ನಡೆಯಲಿ ಎಂದು ಹೇಳುವುದರ ಮೂಲಕ ಮಡಿಕೇರಿ ಶಾಸಕರು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂಬ ಇಂಗಿತ ವ್ಯಕ್ತ ಪಡಿಸಿದರು. ಮದ್ಯ ಮಾರಾಟಕ್ಕೆ ಸಂಬಂಧಿಸಿದ್ದಂತೆ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳ ಲಾಗುವುದೆಂದು ಉಸ್ತುವಾರಿ ಸಚಿವರು ತಿಳಿಸಿದರು.