ಜಿಲ್ಲೆ

'ಮಡಿಕೇರಿ ದಸರಾ ಜನೋತ್ಸವ' ಪುಸ್ತಕ ಬಿಡುಗಡೆ

ಮಡಿಕೇರಿ:

ಐತಿಹಾಸಿಕ ಮಡಿಕೇರಿ ದಸರಾದ ಮಾಹಿತಿಗಳನ್ನು ಸಮರ್ಪಕವಾಗಿ ದಾಖಲಾತಿ ಮಾಡುವ ಕಾರ್ಯ ಈ ವರ್ಷದಿಂದ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಭಾನುವಾರ ಸಂಜೆ ಸ್ಥಳೀಯ ಸತ್ಕಾರ್ ಸಭಾಂಗಣದಲ್ಲಿ ಲೇಖಕ ಎಚ್.ಟಿ. ಅನಿಲ್ ಅವರ 'ಮಡಿಕೇರಿ ದಸರಾ ಜನೋತ್ಸವ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಮಡಿಕೇರಿ ದಸರಾದ ಮಾಹಿತಿಗಳನ್ನು ಸಮರ್ಪಕವಾಗಿ ದಾಖಲಾತಿ ಮಾಡುವ ಕಾರ್ಯ ಇನ್ನೂ ಕೂಡ ನಡೆದಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದರೆ ಮತ್ತು ಸಹಕಾರ ನೀಡಿದರೆ ಈ ಬಾರಿ ದಸರಾ ಯಶಸ್ವಿಯಾಗಲಿದೆ ಎಂದರು.

ತಮ್ಮ ಪುಸ್ತಕದ ಬಗ್ಗೆ ಮಾಹಿತಿ ನೀಡಿದ ಎಚ್.ಟಿ. ಅನಿಲ್, ಒಟ್ಟು 128 ಪುಟಗಳಿರುವ ಈ ಪುಸ್ತಕ ಮಡಿಕೇರಿ ದಸರಾದ ಐತಿಹಾಸಿಕ ಕ್ಷಣಗಳನ್ನು ಹಿಡಿದಿಟ್ಟಿದೆ. ದಸರಾಕ್ಕೆ ಮುನ್ನುಡಿ ಬರೆಯಲಿರುವ ಶಕ್ತಿ ದೇವತೆಗಳ ಕರಗೋತ್ಸವ, ದಶಮಂಟಪಗಳನ್ನು ಹೊರಡಿಸುವ 10 ದೇಗುಲಗಳ ಇತಿಹಾಸ ಸೇರಿದಂತೆ ಇತಿಹಾಸದಲ್ಲಿ ದಾಖಲಾಗಿರುವ ಹಲವು ಅಂಶಗಳು ಪುಸ್ತಕದಲ್ಲಿದೆ ಎಂದರಲ್ಲದೆ ಮಡಿಕೇರಿ ದಸರಾಕ್ಕೆ ಹೊಸರೂಪವನ್ನು ಕಟ್ಟಿಕೊಡುವ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ಸದ್ಯ ಮಡಿಕೇರಿ ದಸರಾವನ್ನು ಪ್ರಚಾರ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. ಮೈಸೂರು ದಸರಾ, ಕೇರಳದ ಅನೇಕ ಉತ್ಸವಗಳ ಕುರಿತು ಮಾಹಿತಿಗಳನ್ನು ಹಂಚಿಕೊAಡ ಅವರು ಮಡಿಕೇರಿ ದಸರಾದಲ್ಲಿ ಇಂದಿಗೂ ಮಹಿಳೆಯರು ಹೋಗಲಾಗದ ಸ್ಥಿತಿ ಇದೆ. ಇದಕ್ಕೆಲ್ಲ ನಾವು ನಮ್ಮ ದಸರಾವನ್ನು ಸರಿಯಾದ ಮಾರ್ಗದಲ್ಲಿ ಹೊರಜಗತ್ತಿಗೆ ತಿಳಿಸದೇ ಇರುವುದೇ ಕಾರಣ ಎಂದರು.

ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ಒಳ್ಳೆಯ ಅನುದಾನ ಬರುತ್ತದೆ. ಮುಂದಿನ ವರ್ಷಗಳಲ್ಲಿ ಶಾಸಕರು 5-10 ಕೋಟಿ ರೂ. ಅನುದಾನ ತರುವ ವಿಶ್ವಾಸ ಇದೆ. ಪಕ್ಷ, ಧರ್ಮ, ಜಾತಿ ಬೇಧಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ದಸರೆಯನ್ನು ಆಚರಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಚಿಂತಕ ಎಸ್.ಐ. ಮನೀರ್ ಅಹಮ್ಮದ್, ಮಡಿಕೇರಿ ನಗರ ದಸರಾ ಸಮಿತಿಯ ಖಜಾಂಚಿ ಅರುಣ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರAಜನ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಪತ್ರಕರ್ತ ಜಿ. ಚಿದ್ವಿಲಾಸ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಜೇಶ್, ದಶಮಂಟಪಗಳ ಸಮಿತಿ ಅಧ್ಯಕ್ಷ ಜಗದೀಶ್, ನಗರಸಭೆ ಸದಸ್ಯ ಅರುಣ್‌ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್ ಇದ್ದರು.

ಮಡಿಕೇರಿ ದಸರಾದಲ್ಲಿ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವ ಬದಲಾವಣೆ ತಂದ ಭೀಮ್‌ಸಿಂಗ್ ಮೊಮ್ಮಕ್ಕಳಾದ ರವಿಕುಮಾರ್ ಮತ್ತು ವಾಸಂತಿ, ದಸರಾ ಮಂಟಪ ಎನ್ನುವ ಪರಿಕಲ್ಪನೆಯ ಹರಿಕಾರ ಶಿವರಾಮ ಶೆಟ್ಟಿ ಮತ್ತು ಅವರ ಪತ್ನಿ ಶಾಂತಲಕ್ಷ್ಮಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.