ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಯುವ ದಸರದಲ್ಲಿ ಕುಣಿದು- ಕುಪ್ಪಳಿಸಲು ಕಾತರದಿಂದ ಕಾಯುತ್ತಿದ್ದ ಯುವಜನತೆ ನಿರಾಸೆ ಅನುಭವಿಸಿದರು. ಶನಿವಾರ ರಾತ್ರಿ ಗಾಂಧಿ ಮೈದಾನದಲ್ಲಿ ಸಹಸ್ರಾರಾರು ಸಂಖ್ಯೆಯಲ್ಲಿ ಯವ ಕಲೋತ್ಸವದಲ್ಲಿ ಜನಸ್ತೋಮ ಸೇರಿತ್ತು. ಆದರೆ, ನಿರೀಕ್ಷಿತ ಕಾರ್ಯಕ್ರಮ ಇಲ್ಲದೆ ಬಹುತೇಕರು ಬೇಸರದಿಂದ ನಿರ್ಗಮಿಸಿದರು.
ರ‌್ಯಾಪ್ ಸಂಗೀತಕ್ಕೆ ಸುದೀರ್ಘ ಅವಧಿ ನೀಡಿದ್ದು ದೊಡ್ಡ ಎಡವಟ್ಟಾಯಿತು. ಕೆಲವು ರ‌್ಯಾಪ್ ಸಂಗೀತ ಹೊರತು ಪಡಿಸಿದ್ದಂತೆ ಉಳಿದವರು ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ರ‌್ಯಾಪ್ ಸಂಗೀತ ನಿಲ್ಲಿಸುವಂತೆ ನಗರಸಭೆ ಬಿಜೆಪಿ ಸದಸ್ಯರು ಸಾಂಸ್ಕೃತಿಕ ಸಮಿತಿ ಪ್ರಮುಖರಿಗೆ ಸೂಚನೆ ನೀಡಬೇಕಾಯಿತು.
ರಾತ್ರಿ ೧೧ ಗಂಟೆಯಿಂದ ಡಿಜೆ ಹಾಕುವಂತೆ ಯುವಕರು ಬೊಬ್ಬೆ ಹಾಕಲಾರಂಭಿಸಿದರು. ನಟ- ನಟಿಯರು, ಗಾಯಕರು ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿಯೂ ಡಿಜೆ… ಡಿಜೆ.. ಡಿಜೆ… ಎಂದು ಘೋಷಣೆ ಮೊಳಗಿಸುತ್ತಿದ್ದರು. ಹೀಗಿದ್ದರೂ, ಡಿಜೆ ಹಾಕಿ ದ್ದು ಮಾತ್ರ ಮಧ್ಯರಾತ್ರಿ ೧.೩೦ ಗಂಟೆ ಬಳಿಕ. ಕೇವಲ ಅರ್ಧ ಗಂಟೆಯಲ್ಲಿ ಡಿಜೆ ನಿಲ್ಲಿಸುವುದರ ಮೂಲಕ ಸಂಭ್ರಮದ ನಿರೀಕ್ಷೆಯಲ್ಲಿದ್ದ ಯುವಜನರಿಗೆ ಬೇಸರವುಂಟು ಮಾಡಲಾಯಿತು.
ಚಂಡೆ, ಡೊಳ್ಳು, ನಗಾರಿ, ನಾಸಿಕ್ ಡೋಳು ಏಕಕಾಲದಲ್ಲಿ ಬಾರಿಸುವ ಮೂಲಕ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಲಾಯಿತು. ಮಧ್ಯರಾತ್ರಿ ಕಳೆದಿದ್ದರಿಂದ ಈ ಕಾರ್ಯಕ್ರಮ ಹೆಚ್ಚು ಅವಧಿ ಮುಂದುವರಿಯಲಿಲ್ಲ. ರಾತ್ರಿ ೧.೩೦ ರಿಂದ ೨ ಗಂಟೆಯವರೆಗೆ ಮಾತ್ರ ಡಿಜೆ ಅಬ್ಬರಕ್ಕೆ ಸಭಾಂಗಣದಲ್ಲಿದ್ದ ಯುವ ಸಮೂಹ ಸಂಭ್ರಮಿಸಿತ್ತು.
ನಿರೂಪಕರೊಬ್ಬರು ಹೆಚ್ಚು ಮಾತನಾಡಿದ್ದು ಪ್ರೇಕ್ಷಕರಲ್ಲಿ ಕಿರಿಕಿರಿ ಉಂಟು ಮಾಡಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕಿಂತ ಮಾತು ಹೆಚ್ಚಾಯಿತು. ಇದರೊಂದಿಗೆ ನೂರಾರು ಸಲ ಹಲೋ ಮಡಿಕೇರಿ… ಎಂದು ಬೊಬ್ಬೆ ಹಾಕುತ್ತಿದ್ದಿದ್ದೂ ಕೂಡ ಜನತೆಗೆ ಹಿಡಿಸಲಿಲ್ಲ. ಇದರೊಂದಿಗೆ ಪದೇ ಪದೇ ಪ್ರೇಕ್ಷಕರಿಗೆ ಚಪ್ಪಾಳೆ ಹೊಡೆಯುವಂತೆ ಹೇಳುತ್ತಿದ್ದರು.
ಕೆ.ಜಿ. ಮದನ್ ನೇತೃತ್ವದ ಕಿಂಬರ್ಲಿ ರಿಕ್ರಿಯೇಷನ್ ತಂಡದವರು ಹಲವು ದಿನದಿಂದ ಯುವ ಕಲೋತ್ಸವ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಯುವಜನರನ್ನು ಸೆಳೆಯುವ ಕಾರ್ಯಕ್ರಮ ಕೊನೆಯಲ್ಲಿಟ್ಟುಕೊಂಡು ಎಡವಟ್ಟು ಮಾಡಿಕೊಂಡರು. ಮಧ್ಯರಾತ್ರಿ ಬಳಿಕ ಯುವ ಕಲೋತ್ಸವ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ, ಪೊಲೀಸರು ವೇದಿಕೆಯಲ್ಲಿ ಬಂದು ತಡವಾಯಿತ್ತೆಂದು ಪ್ರಮುಖರ ಮೇಲೆ ಒತ್ತಡ ಹಾಕುತ್ತಿದ್ದಂತೆ ೨ ಗಂಟೆಗೆ ಕಾರ್ಯಕ್ರಮ ಮುಕ್ತಾಯ ಮಾಡಿದರು.
ಗಮನ ಸೆಳೆದ ನೃತ್ಯ ಸ್ಪರ್ಧೆ
ಕೊಡಗಿನ ನೃತ್ಯ ಶಾಲೆಗಳ ತಂಡಗಳ ನಡುವಿನ ನೃತ್ಯ ಸ್ಪರ್ಧೆ ಗಮನ ಸೆಳೆಯಿತು. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಹಾಗೂ ಟೀಮ್ ಕಾವೇರಮ್ಮ ತಂಡ ಪ್ರಥಮ ಸ್ಥಾನ ಪಡೆಯಿತು. ಮಡಿಕೇರಿಯ ನಾಟ್ಯಕಲಾ ತಂಡ ದ್ವಿತೀಯ, ಸುಂಟಿಕೊಪ್ಪದ ಎನ್.ಕೆ. ಯುನೈಟೆಡ್ ತೃತೀಯ ಹಾಗೂ ಗೋಣಿಕೊಪ್ಪದ ಏರ್ ರಿಪ್ಲೆಕ್ಷನ್ ತಂಡ ಸಮಾಧಾನಕಾರ ಬಹುಮಾನ ಪಡೆಯಿತು.
ಕಿಂಗ್ಸ್ ಆಫ್ ಕೂರ್ಗ್ ಹಾಗೂ ಟೀಮ್ ಕಾವೇರಮ್ಮ ತಂಡ ಸಮ ಅಂಕ ಪಡೆದಿತ್ತು. ಅಂಕ ಸಮ ಬಂದಲ್ಲಿ ನೃತ್ಯ ಸಂಯೋಜಕರ ನೃತ್ಯದ ಆಧಾರದಲ್ಲಿ ಫಲಿತಾಂಶ ನಿರ್ಧರಿಸಲಾಗುವುದೆಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. ಅದರಂತೆ ನೃತ್ಯ ಸಂಯೋಜಕರ ನಡುವೆ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಲಾಯಿತು. ಇದಕ್ಕೆ ಒಂದು ತಂಡದವರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಕೊನೆಗೆ ೨ ತಂಡವನ್ನು ಜಂಟಿ ವಿಜೇತರೆಂಬ ನಿರ್ಧಾರಕ್ಕೆ ಸಂಘಟಕರು ಬರಬೇಕಾಯಿತು. ಆದರೆ, ಇದನ್ನು ಧ್ವನಿವರ್ಧಕ ಮೂಲಕ ಬಹಿರಂಗ ಪಡಿಸಲಿಲ್ಲ.
ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಡ್ರೀಮ್ ಸ್ಟಾರ್ಸ್, ಮಡಿಕೇರಿಯ ಟೀಮ್ ಗಾಡ್ ತಂಡಗಳು ಪಾಲ್ಗೊಂಡಿದ್ದವು. ಎನ್‌ಕೆ ಯುನೈಟೆಡ್ ಹಾಗೂ ನಾಟ್ಯಕಲಾ ತಂಡಕ್ಕೆ ಮಧ್ಯರಾತ್ರಿ ೧೨ ಗಂಟೆ ಬಳಿಕ ಅವಕಾಶ ನೀಡಲಾಯಿತು. ನೃತ್ಯ ಸಂಯೋಜಕ ಬಿ.ಎನ್. ದಿನೇಶ್ ಆಯೋಜಕ ತಂಡದಲ್ಲಿ ಇದ್ದಿದ್ದರಿಂದ ಅವರ ಗುರುಕುಲ ಕಲಾ ಮಂಡಳಿ ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿರಿಲ್ಲ. ಸ್ಪರ್ಧೆ ಮುಗಿದ ಬಳಿಕ ತಂಡದ ಕಲಾವಿದರು ಅದ್ಭುತ ಪ್ರದರ್ಶನ ನೀಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ವಿವಿಧ ಕಾರ್ಯಕ್ರಮ
ರ‌್ಯಾಪ್ ಸಂಗೀತ: ರಿತೇಶ್, ದಿಲನ್ ಚಂಗಪ್ಪ, ಚೀರಾವ್ ಬಾಯ್ಸ, ಬಿ ಟೌನ್, ತಿಮಿಂಗಿಲ ತಂಡದಿಂದ ರ‌್ಯಾಪ್ ಸಂಗೀತ ಪ್ರದರ್ಶನ ಗೊಂಡಿತ್ತು. ಉದಿತ್ ಹರಿತಾಸ್, ಚಂದನ್ ಆಚಾರ್ಯ, ರಘು ಗೌಡ ಸ್ಟಾರ್ ನೈಟ್ ನಡೆಸಿಕೊಟ್ಟರು. ಸಾಂಪ್ರದಾಯಿಕ ಉಡುಗೆ- ತೊಡುಗೆ ಯೊಂದಿಗೆ ರೂಪದರ್ಶಿಗಳು ವೇದಿಕೆಯಲ್ಲಿ ಫ್ಯಾಷನ್ ಶೋ ನಡೆಸಿದರು.
ನಟ- ನಟಿಯರು
ಪಾಯಲ್ ಚಂಗಪ್ಪ, ತಾರಕ್ ಪೊನ್ನಪ್ಪ, ತಪಸ್ವಿನಿ ಪೂಣಚ್ಚ, ತೇಜಸ್ವಿನಿ ಶರ್ಮಾ, ನೆರವಂಡ ಅಯ್ಯಪ್ಪ, ಅನು ಅಯ್ಯಪ್ಪ, ವಸಿಷ್ಠ ಸಿಂಹ ವೇದಿಕೆಗೆ ಆಗಮಿಸಿದ್ದರು. ವೇದಿಕೆಗೆ ಆಗಮಿಸಿದ ನಟ- ನಟಿಯರ ಬಗ್ಗೆ ಬಹುತೇಕ ಪ್ರೇಕ್ಷಕರಲ್ಲಿ ಕುತೂಹಲ ಇರಲಿಲ್ಲ. ನಟ- ನಟಿಯರು ವೇದಿಕೆ ಬಂದ ಸಂದರ್ಭ ಕೂಡ ಡಿಜೆ… ಡಿಜೆ… ಡಿಜೆ… ಎಂದು ಯುವಜನ ಬೊಬ್ಬೆ ಹಾಕುತ್ತಿದ್ದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಭವಾನಿ ನಂಜುಂಡ, ದೀಪಿಕಾ ಅಯ್ಯಪ್ಪ, ಐಶ್ವರ್ಯ ದೇಚಮ್ಮ, ಅಭೀನ್ ರಾಯ್, ಬಿ.ಟಿ. ಅಂಕಿತಾ, ಅಬ್ರಾನ್ ಸುದೇವ್ ಅವರನ್ನು ಯುವ ಕಲೋತ್ಸವ ಆಯೋಜಕರಾದ ಕಿಂಬರ್ಲಿ ರಿಕ್ರಿಯೇಷನ್ ತಂಡದಿಂದ ಸನ್ಮಾನಿಸ ಲಾಯಿತು.
ದೇಶ ಪ್ರೇಮ ಇರಲಿ
ಯುವಜನರಲ್ಲಿ ದೇಶ ಪ್ರೇಮ ಇರಬೇಕೆಂದು ಯುವ ಕಲೋತ್ಸವ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದರು.
ದೇಶದ ಆಚಾರ- ವಿಚಾರ, ಧರ್ಮ- ಸಂಸ್ಕೃತಿ ಉಳಿಸಿಕೊಳ್ಳಬೇಕು. ದೇಶವನ್ನು ಯುವಜನರು ಪ್ರೀತಿಸಬೇಕೆಂದು ಕರೆ ನೀಡಿದರು. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಅದ್ದೂರಿ ದಸರಾ ಆಯೋಜಿಸಲು ಸಾಧ್ಯವಾಗಿರಲಿಲ್ಲ ಎಂದರು.
ದಸರಾ ಸಾಂಪ್ರದಾಯಿಕ ಭಕ್ತಿಭಾವದ ಮಿಲನ. ದಶಮಂಟಪಗಳ ಶೋಭಾಯಾತ್ರೆಗೆ ಐತಿಹಾಸಿಕ ಹಿನ್ನೆಲೆ ಇದೆ ಎಂದು ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದಸರಾ ಸಮಿತಿ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಹೇಳಿದರು. ೨೦೧೮ ರಿಂದ ಮಡಿಕೇರಿ ದಸರಕ್ಕೆ ಇದ್ದ ಸೂತಕ ದ ಛಾಯೆ ಮರೆಯಾಗಿದೆ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ನಗರ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ದಸರಾ ಸಮಿತಿ ಉಪಾಧ್ಯಕ್ಷ ಬಿ.ಪಿ. ಡಿಶು, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ಸದಸ್ಯರಾದ ಎಸ್.ಸಿ. ಸತೀಶ್, ಬಿ.ಕೆ. ಅರುಣ್‌ಕುಮಾರ್, ಕಾಳಚಂಡ ಅಪ್ಪಣ್ಣ, ಪಾಣತ್ತಲೆ ಕವನ್ ಕಾವೇರಪ್ಪ ಮತ್ತಿತರರು ಇದ್ದರು.