ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದಶಮಂಟಪ ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಅಂತಿಮವಾಗಿ ಅನುದಾನ ನಿಗದಿ ಪಡಿಸಲಾಗಿದೆ. ಪ್ರತಿ ಮಂಟಪಕ್ಕೆ ೩.೩೦ ಲಕ್ಷ ಹಾಗೂ ಕರಗಕ್ಕೆ ತಲಾ ೨ ಲಕ್ಷ ರೂಪಾಯಿ ನೀಡಲು ತೀರ್ಮಾನಿಸಲಾಗಿದೆ. ಆ ಮೂಲಕ ಅನುದಾನ ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ.
ರಾಜ್ಯ ಸರ್ಕಾರ ಮಂಜೂರು ಮಾಡಿರುವ ೧ ಕೋಟಿ ರೂ. ಅನುದಾನದಲ್ಲಿ ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ೨೫ ಲಕ್ಷ ರೂ. ನೀಡಬೇಕು. ಮಂಟಪಕ್ಕೆ ೨ ಲಕ್ಷ ಹಾಗೂ ಕರಗಗಳಿಗೆ ೧ ಲಕ್ಷ ರೂ. ಅನುದಾನ ನೀಡುವ ಇಂಗಿತವನ್ನು ಮಡಿಕೇರಿ ಶಾಸಕರು ವ್ಯಕ್ತ ಪಡಿಸಿದ್ದರು.
ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಡಿಕೇರಿ ನಗರ ದಸರಾ ಸಮಿತಿ ಸಭೆಯಲ್ಲಿ ಪ್ರತಿ ಮಂಟಪಕ್ಕೆ ೩.೫೦ ಲಕ್ಷ ಹಾಗೂ ಕರಗಕ್ಕೆ ತಲಾ ೨.೫೦ ಲಕ್ಷ ರೂ. ಅನುದಾನ ನೀಡಬೇಕೆಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ನೇತೃತ್ವದಲ್ಲಿ ಪ್ರಮುಖರು ಪಟ್ಟುಹಿಡಿದ್ದರು.
ಮಡಿಕೇರಿ ನಗರ ದಸರಾ ಸಮಿತಿ ನಿರ್ಧರಿಸಿದ್ದ ಅನುದಾನವನ್ನು ಕಡಿತ ಮಾಡುವ ಇಂಗಿತವನ್ನು ಶಾಸಕರು ವ್ಯಕ್ತ ಪಡಿಸುತ್ತಿದ್ದಂತೆ ಮತ್ತಷ್ಟು ಗೊಂದಲ ಏರ್ಪಟ್ಟಿತ್ತು. ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಶಾಸಕರನ್ನು ಭೇಟಿ ಮಾಡಿ, ಅನುದಾನ ಕಡಿತ ಮಾಡದ್ದಂತೆ ಮನವೊಲಿಸಲು ಸಫಲರಾಗಿದ್ದಾರೆ.
ದೇಣಿಗೆ ಸಂಗ್ರಹ
ಮಡಿಕೇರಿ ನಗರ ದಸರಾ ಸಮಿತಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಮೊದಲ ಸಭೆಯಲ್ಲಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಘೋಷಿಸಿದ್ದರು. ಆದರೆ, ದಸರಕ್ಕೆ ಹೆಚ್ಚುವರಿ ಅನುದಾನದ ಅಗತ್ಯತೆ ಇರುವುದರಿಂದ ಇದೀಗ ದಾನಿಗಳಿಂದ ದೇಣಿಗೆ ಸಂಗ್ರಹಿಸ ಲು ಪ್ರಮುಖರು ನಿರ್ಧರಿಸಿದ್ದಾರೆ.
ರೆಸಾಟರ್, ಬ್ಯಾಂಕ್ ಸೇರಿದ್ದಂತೆ ಗಣ್ಯರಿಂದ ೨೫ ಲಕ್ಷ ರೂ. ಗಳಷ್ಟು ಸಂಗ್ರಹಿಸಲು ಚರ್ಚಿಸಲಾಗಿದೆ. ದೇಣಿಗೆ ಸಂಗ್ರಹದಲ್ಲಿ ಮಂಟಪಗಳಿಗೆ ತಲಾ ೨೦ ಸಾವಿರ ಹಾಗೂ ಕರಗಗಳಿಗೆ ತಲಾ ೩೦ ಸಾವಿರ ರೂ. ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನೂ ಮಂಟಪ ಮತ್ತು ಕರಗ ಸಮಿತಿಗೆ ನೀಡಲಾಗಿದೆ.
ಏತನ್ಮಧ್ಯೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನ ಸೆಳೆಯುವುದರ ಮೂಲಕ ಹೆಚ್ಚುವರಿಯಾಗಿ ೨೫ ಲಕ್ಷ ರೂ. ಮಂಜೂರು ಮಾಡಿಸುವ ಪ್ರಯತ್ನ ಮಾಡುವುದಾಗಿ ಶಾಸಕರು ದಸರಾ ಸಮಿತಿ ಪ್ರಮುಖರಿಗೆ ನೀಡಿದ್ದಾರೆ.
ಪ್ರದರ್ಶನ ಬದಲಾವಣೆ
ವಿಜಯದಶಮಿಯಂದು ರಾತ್ರಿ ಮಡಿಕೇರಿ ಮುಖ್ಯಬೀದಿಯಲ್ಲಿ ದಶಮಂಟಪಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಾಲ್ಕು ವರ್ಷ ಬಳಿಕ ಅದ್ದೂರಿ ದಸರಾ ಆಯೋಜಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಡಿಕೇರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಮಂಟಪಗಳು ಪ್ರದರ್ಶನ ನೀಡಬೇಕೆಂಬ ಸೂಚನೆ ನೀಡಲಾಗಿದೆ.
ತೀರ್ಪುಗಾರರಿಗೆ ಮಂಟಪ ಪ್ರದರ್ಶನ ಮಾಡುವ ಸಮಯ ಹಾಗೂ ಸ್ಥಳದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ರಾಜ್‌ದರ್ಶನ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿರುವ ದಶಮಂಟಪ ಸಮಿತಿ ಸಭೆಯಲ್ಲಿ ಸಮಯ ಮತ್ತು ಸ್ಥಳದ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದೆಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ದಸರಾ ಕಾರ್ಯಕ್ರಮ ನಿಗದಿ
ಜನೋತ್ಸವ ಮಡಿಕೇರಿ ದಸರಾ ಕಾರ್ಯಕ್ರಮ ನಿಗದಿ ಪಡಿಸಲಾಗಿದೆ. ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಿತಿ ಸಭೆಯಲ್ಲಿ ಕಾರ್ಯಕ್ರಮ ಪಟ್ಟಿ ಅಂತಿಮ ಮಾಡಲಾಗಿದೆ.
ಸೆ.೨೬ ರಂದು ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮಡಿಕೇರಿ ದಸರಕ್ಕೆ ಚಾಲನೆ ನೀಡಲಾಗು ತ್ತದೆ. ೨೭ ರಿಂದ ಗಾಂಧಿ ಮೈದಾನದಲ್ಲಿ ನವರಾತ್ರಿ ಸಾಂಸ್ಕೃತಿಕ ವೈವಿಧ್ಯಮ ಕಾರ್ಯಕ್ರಮ ಪ್ರಾರಂಭವಾಗಲಿದೆ. ೩೦ ರಂದು ಮಹಿಳಾ ದಸರಾ, ಅಕ್ಟೋಬರ್ ೧ ರಂದು ಯುವ ದಸರಾ, ೨ ರಂದು ಜಾನಪದ ಜಾತ್ರೆ, ೩ ರಂದು ಮಕ್ಕಳ ದಸರಾ, ೪ ರಂದು ಬಹುಭಾಷಾ ಗೋಷ್ಠಿ ಹಾಗೂ ಆಯುಧ ಪೂಜಾ ಕಾಯ್ಕ್ರಮ ನಡೆಯಲಿದೆ. ೫ ರಂದು ರಾತ್ರಿ ೧೦ ಗಂಟೆಯಿಂದ ಮುಂಜಾನೆವರೆಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
**
ಶಾಸಕರ ಮನವೊಲಿಸುವ ಮೂಲಕ ಪ್ರತಿ ಮಂಟಪಗಳಿಗೆ ೩.೩೦ ಲಕ್ಷ ಹಾಗೂ ಕರಗಗಳಿಗೆ ತಲಾ ೨ ಲಕ್ಷ ರೂ. ನಿಗದಿ ಪಡಿಸಲಾಗಿದೆ. ಹೆಚ್ಚುವರಿ ಅನುದಾನ ಲಭ್ಯವಾದ್ದಲ್ಲಿ ಮಂಟಪಗಳಿಗೆ ೨೦ ಸಾವಿರ, ಕರಗಗಳಿಗೆ ೩೦ ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ. ಮನು ಮಂಜುನಾಥ್, ಅಧ್ಯಕ್ಷರು, ಮಡಿಕೇರಿ ದಸರಾ ದಶಮಂಟಪ ಸಮಿತಿ.