ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮೂಲಜ್ಞಾನ ನಿರಾಕರಿಸುವುದು ನಮ್ಮ ತನ ಕಳೆದುಕೊಂಡಂತೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇ ಗೌಡ ಹೇಳಿದರು.
ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಜನೋತ್ಸವ ಮಡಿಕೇರಿ ದಸರಾ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ದಸರಾ-೨೦೨೨ ಉದ್ಘಾಟಿಸಿ ಮಾತನಾಡಿದರು. ಜಾನಪದ ಹಳೆಯದೆಂದು ಪ್ರಚಾರ ಮಾಡಬೇಡಿ. ಜನಪದ ಹೊಸ ಸೃಷ್ಟಿಗೆ ಪೂರಕವಾಗಿರುವುದು. ಪ್ರಕೃತಿಗೆ ವಿರುದ್ಧವಾಗಿ ಇರುವುದು ಸರಿಯಲ್ಲ ಎಂದರು.
ಜಾನಪದಕ್ಕೆ ನಮ್ಮ ತಾಯಿ ಸ್ಥಾನ ನೀಡಬೇಕು. ಆ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಅಮ್ಮ- ಜನಪದ ಕಾರ್ಯಕ್ರಮ ಆಯೋಜಿಸುವಂತೆ ಕೊಡಗಿ ನ ಶಾಸಕರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಹೃದಯದಿಂದ ವ್ಯಕ್ತವಾಗುವ ವಿಚಾರ ಜನಪದ. ಜೀವನಶೈಲಿ ಜಾನಪದ ಪದ್ಧತಿ. ೬ ವರ್ಷದಿಂದ ಜಿಲ್ಲಾ ಘಟಕ ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿದೆ. ೫ ತಾಲೂಕು ಘಟಕ ರಚಿಸಲಾಗಿದೆ ಎಂದರು.
ವೇದಿಕೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಖಜಾಂಚಿ ಶ್ವೇತಾ ಪ್ರಶಾಂತ್ ಮತ್ತಿತರರು ಇದ್ದರು. ಪ್ರತಿಮಾ ಹರೀಶ್ ರೈ, ಜಯಲಕ್ಷ್ಮಿ, ಚೋಕೀರ ಅನಿತಾ ನಿರೂಪಿಸಿ ದರು. ಲಿಯಾಕತ್ ಆಲಿ ಪ್ರಾರ್ಥಿಸಿದರು. ಎಸ್.ಐ. ಮುನೀರ್ ಅಹಮ್ಮದ್ ಸ್ವಾಗತಿಸಿದರು. ಎಚ್.ಟಿ. ಅನಿಲ್ ವಂದಿಸಿದರು.
ಜನಪದಕ್ಕೆ ಒತ್ತು
ಜನಪದ ದಸರಾ ಪ್ರಯುಕ್ತ ಉದ್ಘಾಟನಾ ವೇದಿಕೆಯಲ್ಲಿ ವಿಶೇಷವಾಗಿ ಜಾನಪದೀಯ ಶೈಲಿಯಲ್ಲಿ ಅಲಂಕರಿಸಲಾಗಿತ್ತು. ರಾಗಿ ಬೀಸುವ ವರು, ಅಕ್ಕಿ ಕುಟ್ಟುವವರು ವೇದಿಕೆ ಮುಂಭಾಗದಲ್ಲಿದ್ದರು. ಹುಲ್ಲಿನ ಕಂತೆಗಳನ್ನು ವೇದಿಕೆಯಲ್ಲಿ ಜೋಡಿಸುವುದರ ಮೂಲಕ ಗ್ರಾಮೀಣ ವಾತಾವರಣ ಸೃಷ್ಟಿಸಲಾಗಿತ್ತು.
ಜಾನಪದ ಕ್ರೀಡೆಯಲ್ಲಿ ಗೋಣಿಚೀಲ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಮೂರ್ನಾಡಿನ ಹರೀಶ್ ಕಿಗ್ಗಾಲು ನೇತೃತ್ವದಲ್ಲಿ ಹಳೆಯ ವಸ್ತುಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಜಾನಪದ ನೃತ್ಯ- ಹಾಡು
ವಿವಿಧ ತಂಡಗಳಿಂದ ವೇದಿಕೆಯಲ್ಲಿ ಜಾನಪದ ನೃತ್ಯ ಹಾಗೂ ಜಾನಪದ ಗೀತೆ ಗಾಯನ ನಡೆಯಿತು. ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜು ತಂಡ, ಚಿತ್ರಾ ಆರ್ಯನ್ ತಂಡ, ವೀಣಾ ತಂಡದಿಂದ ಜಾನಪದ ಗೀತೆ ಹಾಡಲಾಯಿತು. ಶನಿವಾರಸಂತೆ, ಸೋಮವಾರಪೇಟೆ ಜಾನಪದ ಪರಿಷತ್, ಕಡಗದಾಳು ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಚೇರಂಬಾಣೆ ಗೌಡ ಸಮಾಜ ತಂಡದಿಂದ ನೃತ್ಯ- ಹಾಡು ಪ್ರೇಕ್ಷಕರ ಗಮನ ಸೆಳೆಯಿತು.
ಕೊಡಗು ಜಾನಪದ ಕಲಾವಿದರ ಬಳಗ, ಕೊಡಗು ಮಹಿಳಾ ಬರಹಗಾರರ ಒಕ್ಕೂಟ, ಸೋಮವಾರಪೇಟೆಯ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ಗೀತೆ ಗಾಯನ ನಡೆಯಿತು.
ಗಾಂಧಿ ಜಯಂತಿ ಆಚರಣೆ
ಜಾನಪದ ದಸರಕ್ಕೆ ಚಾಲನೆ ನೀಡುವ ಮುನ್ನ ಜಾನಪದ ಪರಿಷತ್ ಪ್ರಮುಖರು ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಿದರು. ಡೊಳ್ಳು ಕುಣಿತ, ಪೂಜಾ ಕುಣಿತ ಕಲಾ ತಂಡದೊಂದಿಗೆ ಗಾಂಧಿ ಪ್ರತಿಮೆ ಮುಂಭಾಗದಿಂದ ಬಯಲು ರಂಗಮಂದಿರದವರೆಗೆ ಮೆರವಣಿಗೆ ಮೂಲಕ ಆಗಮಿಸಿದರು.