ಮಡಿಕೇರಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೭ನೇ ಜನ್ಮ ದಿನಾಚರಣೆ ಸರ್ಕಾರದ ನಿರ್ದೇಶನದಂತೆ ಅರ್ಥ ಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜನ್ಮ ದಿನಾಚರಣೆ ಆ.೨೦ ರಂದು ಆಚರಿಸಬೇಕಿದೆ. ಹಿಂದುಳಿದ ಸಮಾಜದವರನ್ನು ಸೇರಿಸಿ ಕಾರ್ಯಕ್ರಮ ಯಶಸ್ಸುಗೊಳಿಸುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಡಿಸಿ ಸೂಚಿಸಿದರು. ಹಿಂದುಳಿದ ವರ್ಗಗಳ ವಿವಿಧ ಕಾಯಕ ಸಮುದಾಯದವರ ಮೂಲ ಕಸುಬು ಜನರಿಗೆ ಪರಿಚಯಿಸಬೇಕು. ಹಿಂದುಳಿದ ವರ್ಗಗಳ ವಿವಿಧ ಕಾಯಕ ಸಮುದಾಯದವರಿಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅವಕಾಶ ಮಾಡುವಂತೆ ನಿರ್ದೇಶನ ನೀಡಿದರು.
ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್ ಮಾತನಾಡಿ, ೩ ದಿನ ಕಾಲ ಕಾರ್ಯಕ್ರಮ ಏರ್ಪಡಿಸಬೇಕಿದ್ದು, ಆ.೨೦ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಡಗಿ, ನೇಕಾರ, ಕಂಬಾರ, ಕುಂಬಾರ, ವಿಶ್ವಕರ್ಮ ಮುಂತಾದ ಕುಲ ಕಸುಬುದಾರರು ತಯಾರಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಬೇಕಿದೆ. ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆ ನೀಡಲು ಕನಿಷ್ಠ ೧೫ ಮಳಿಗೆ ತೆರೆಯಬೇಕೆಂದರು.
ಆ.೨೧ ರಂದು ಜಿಲ್ಲಾಮಟ್ಟದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕಿದೆ. ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಯೋಗ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಬೇಕಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಮಾಡಬೇಕಿದೆ ಎಂದರು.
ಆ.೨೨ ರಂದು ಶಾಲಾ ಮಕ್ಕಳಿಗೆ ಅರಣ್ಯದ ಮಹತ್ವದ ಬಗ್ಗೆ ತಿಳುವಳಿಕೆ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು. ಅರಸು ಅವರ ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸುವಂತಾಗಲು ಅಗತ್ಯ ಸಹಕಾರಕ್ಕೆ ಕೋರಿದರು.
ಮಾದಾಪುರ ಕೊಡವ ಸಮಾಜ ಅಧ್ಯಕ್ಷ ಮೇದಪ್ಪ, ಕುಂಬಾರ-ಕುಲಾಲ ಸಮಾಜ ಅಧ್ಯಕ್ಷ ನಾಣಯ್ಯ, ನೇಕಾರ ಒಕ್ಕೂಟ ಜಿಲ್ಲಾಧ್ಯಕ್ಷ ಟಿ.ಕೆ.ಪಾಂಡುರಂಗ, ಭಗೀರಥ-ಉಪ್ಪಾರ ಸಮುದಾಯದ ಪರಮೇಶ್ ಸಾಗರ್, ಬಿಲ್ಲವ ಸಮಾಜದ ಹರೀಶ್ ಮತ್ತಿತರರು ಜನ್ಮ ದಿನಾಚರಣೆ ಬಗ್ಗೆ ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಪೌರಾಯುಕ್ತ ವಿಜಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಧಿಕಾರಿ ಹೊನ್ನೇಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾದೇವ, ಮೊರಾರ್ಜಿ ದೇಸಾು ವಸತಿ ಶಾಲೆ ಪ್ರಾಂಶುಪಾಲರಾದ ಲೋಕೇಶ್ (ಮಾದಾಪುರ), ಪ್ರಕಾಶ್ (ಕೂಡಿಗೆ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ಕವಿತಾ ಮತ್ತಿತರರು ಇದ್ದರು.