ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಸೇರಿದ್ದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಮಡಿಕೇರಿ ನಗರ ಠಾಣೆಗೆ ನೀಡಿದ್ದ ದೂರನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ನಷ್ಟದ ವೀಕ್ಷಣೆ ಬಂದಾಗ ಮೊಟ್ಟೆ ಎಸೆತ ಪ್ರಕರಣ ದಾಖಲಾಗಿತ್ತು.ಈ ಸಂದರ್ಭ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಮೊಟ್ಟೆ ಎಸೆತ ಖಂಡಿಸಿ ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರು ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.
ಮೊಟ್ಟೆ ಎಸೆತಕ್ಕೆ ಸಂಬಂಧಿಸಿದ್ದಂತೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಬಿಜೆಪಿ ನಗರಸಭೆ ಸದಸ್ಯ ಕವನ್ ಕಾವೇರಪ್ಪ ಸೇರಿದ್ದಂತೆ ಹಲವರ ವಿರುದ್ಧ ನಗರ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಅನಿತಾ ಪೂವಯ್ಯ, ಶೌಚಾಲಯ ವೀಕ್ಷಣೆಗೆ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದರೆಂದು ನಗರ ಠಾಣೆಗೆ ದೂರು ನೀಡಿದ್ದರು.
ಎ.ಎಸ್. ಪೊನ್ನಣ್ಣ ಸೇರಿದ್ದಂತೆ ವಿಧಾನ ಪರಿಷತ್ ಮಾಜಿ ಸದಸ್ಯೆ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ಡಾ.ಮಂಥರ್ ಗೌಡ, , ಚಂದ್ರಶೇಖರ್, ಸೂರಜ್ ಹೊಸೂರು, ತೆನ್ನೀರ ಮೈನಾ, ಮಂದ್ರಿರ ಮೋಹನ್ ದಾಸ್ ಸೇರಿದಂತೆ ೧೧ ಜನರ ವಿರುದ್ಧ ದೂರು ನೀಡಿ ದ್ದರು. ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎ.ಎಸ್. ಪೊನ್ನಣ್ಣ ಹೈಕೋರ್ಟ್‌ನಿಂದ ಈ ಮೊದಲು ತಡೆಯಾಜ್ಞೆ ತಂದಿದ್ದರು.
ಈ ಪ್ರಕರಣವನ್ನು ಬುಧವಾರ ಹೈಕೋರ್ಟ್ ಪೀಠ ಕೈಗೆತ್ತಿಕೊಂಡಿತು. ವಕೀಲರಾದ ಸಂದೇಶ್ ಚೌಟ ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಪೀಠ , ಇದೊಂದು ಸುಳ್ಳು ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ದಾವೆ ಎಂದು ಪರಿಗಣಿಸಿ ಕೇಸ್ ವಜಾಗೊಳಿಸಿದೆ ಎಂದು ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.