ಜಿಲ್ಲೆ

ಬೆಂಗಳೂರಿನಲ್ಲಿ ಸೆಂಟರ್ ಇಂಡಿಯನ್ ಟ್ರೇಡ್ ಯೂನಿಯನ್‌ನ ೧೭ನೇ ಅಖಿಲ ಭಾರತ ಸಮ್ಮೇಳನ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಬೆಂಗಳೂರಿನಲ್ಲಿ ಜನವರಿ ೧೮ ರಿಂದ ೨೨ ರವರೆಗೆ ಆಯೋಜಿಸಿರುವ ಸೆಂಟರ್ ಇಂಡಿಯನ್ ಟ್ರೇಡ್ ಯೂನಿಯನ್‌ನ ೧೭ನೇ ಅಖಿಲ ಭಾರತ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್ ಕರೆ ನೀಡಿದರು.
ಸಮ್ಮೇಳನ ಹಿನ್ನೆಲೆಯಲ್ಲಿ ಸಿಐಟಿಯು ಕೊಡಗು ಜಿಲ್ಲಾ ಸಮಿತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆ ಮತ್ತು ಲಾಂಚನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಕೇಂದ್ರ ಸರ್ಕಾರದ ಬಂಡವಾಳಶಾಹಿ ಪರ ಆರ್ಥಿಕ ನೀತಿಯಿಂದ ರೈತರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಉದ್ದಿಮೆದಾರರು ಸಂಕಷ್ಟದಲ್ಲಿದ್ದಾರೆ. ಇದರೊಂದಿಗೆ ನಿರುದ್ಯೋಗ, ಬಡತನ ಹಾಗೂ ಹಸಿವು ಹೆಚ್ಚಾಗುತ್ತಿದೆ ಎಂದು ಟೀಕಿಸಿದರು.

ಸಂವಿಧಾನದ ಮೂಲ ಆಶಯ ಉಲ್ಲಂಘಿಸಿ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ದೇಶದಲ್ಲಿ ಪಾಳೆಗಾರಿಕೆ, ಕೋಮುವಾದಿ ಮತ್ತು ಜಾತಿವಾದಿ ಶಕ್ತಿ ವಿಜೃಂಭಿಸುತ್ತಿವೆ. ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಹಿರಿಯ ವಕೀಲ ಕುಂಞ ಅಬ್ದುಲ್ಲಾ, ಕರ್ನಾಟಕ ರಾಜ್ಯ ರೈತ ಸಂಘ ಮುಖಂಡ ಲಕ್ಷ್ಮಣ್, ಎಐಟಿಯುಸಿ ಜಿಲ್ಲಾಧ್ಯಕ್ಷ ಸೋಮಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ತೋಟ ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್, ಸಿಐಟಿಯು ಪದಾಧಿಕಾರಿ ಕೆ.ಎಸ್. ರತೀಶ್, ಗ್ರಾಪಂ ನೌಕರರ ಸಂಘ ಕಾರ್ಯದರ್ಶಿ ನವೀನ್ ಕುಮಾರ್, ಅಂಗನವಾಡಿ ಸಂಘದ ಪ್ರಮುಖರಾದ ಭಗೀರತಿ, ಬಿಸಿಯೂಟ ನೌಕರರ ಸಂಘದ ಪ್ರಮುಖರಾದ ಕುಸುಮ, ಕೊಡಗು ಜಿಲ್ಲಾ ಜನರಲ್ ವರ್ಕರ್ ಯೂನಿಯನ್ ಜಿಲ್ಲಾಧ್ಯಕ್ಷ ಎಚ್.ಬಿ. ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.