ಮಡಿಕೇರಿ: ಮಡಿಕೇರಿ ತಾಲೂಕು ವ್ಯಾಪ್ತಿಯ ೨ನೇ ಮೊಣ್ಣಂಗೇರಿ ಗ್ರಾಮದ ರಾಮಕೊಲ್ಲಿಯಲ್ಲಿ ಭೂಮಿ ಬಿರುಕು ಬಿಟ್ಟಿರುವ ಸ್ಥಳಕ್ಕೆ ಶುಕ್ರವಾರ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದರು. ಗಣಿ ಮತ್ತು ಭೂಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಎನ್‌ಡಿಆರ್‌ಎಫ್ ತಂಡದವರು ಪರಿಶೀಲಿಸಿದರು.
೨೦೧೮ನೇ ಇಸವಿಯಲ್ಲಿ ಬಿರುಕು ಬಿಟ್ಟ ಸ್ಥಳ ಹಾಗೂ ಭೂಕುಸಿತವಾದ ಸ್ಥಳ ಪರಿಶೀಲನೆ ನಡೆಸಿದರು. ೨೦೧೮ ರಲ್ಲಿ ಗುಡ್ಡ ಕುಸಿದಿದ್ದ ಪ್ರದೇಶದ ಒಂದು ಭಾಗದಲ್ಲಿ ಅಲ್ಪ ಪ್ರಮಾಣದ ಮಣ್ಣು ಜರಿದಿದೆ. ಪಕ್ಕದ ಗುಡ್ಡದಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿರುವುದು ಕಂಡು ಬಂದಿದೆ.
ಗುಡ್ಡದ ಕೆಳಭಾಗದ ಪೂರ್ವ ದಿಕ್ಕಿನಲ್ಲಿ ೯೦೦ ಮೀಟರ್ ದೂರದಲ್ಲಿ ೩೦ ಮನೆಗಳಿರುತ್ತದೆ. ಮಳೆ ಹೆಚ್ಚಾಗಿರುವ ಕಾರಣ ಹಾಗೂ ಮಂಜು ಕದಿರುವುದರಿಂದ ಬಿರುಕು ಬಿಟ್ಟಿರುವ ಪ್ರದೇಶ ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ, ಮಳೆ ಕಡಿಮೆಯಾದ ನಂತರ ಬಿರುಕು ಬಿಟ್ಟಿರುವ ಪ್ರದೇಶದ ಅಧ್ಯಯನ ನಡೆಸಲಾಗುವುದೆಂದು ಗಣಿ ಮತ್ತು ಭೂಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ ತಿಳಿಸಿದ್ದಾರೆ.