ಜಿಲ್ಲೆ

ವಚನಗಳ ಮೂಲಕ ಜಾಗೃತಿ ಮೂಡಿಸಿದವರು ಮಡಿವಾಳ ಮಾಚಿದೇವರು

ಸುನಿಲ್ ಪೊನ್ನೇಟಿ

ಕುಶಾಲನಗರ:

ಹನ್ನೆರಡನೇ ಶತಮಾನದಲ್ಲಿ ಅಂದು ಸಮಾಜದಲ್ಲಿ ತಾಂಡವಿಸಿದ್ದ ಮೂಢನಂಬಿಕೆ, ಮೇಲು ಕೀಳು ಹಾಗೂ ವರ್ಣ ವ್ಯವಸ್ಥೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ದಿಟ್ಟ ಹೋರಾಟಗಾರ ಮಡಿವಾಳ ಮಾಚಿದೇವರು ಎಂದು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಭೀಮವಾದ ಬಣದ ಅಧ್ಯಕ್ಷ ಕೆ.ಬಿ.ರಾಜು ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುಂಡೂರಾವ್ ಬಡಾವಣೆಯಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಮಹಿಳೆಯರ ಸ್ವಾತಂತ್ರ‍್ಯಕ್ಕಾಗಿ 12 ನೇ ಶತಮಾನದಲ್ಲಿ ಶರಣರು ಹೋರಾಟ ನಡೆಸಿದ್ದರು. ತರುವಾಯ 21 ನೇ ಶತಮಾನದಲ್ಲಿ ಶೋಷಿತರ, ದೀನ ದಲಿತರ ಆಶಾಕಿರಣವಾಗಿ ಉದ್ಭವಿಸಿದ ಡಾ.ಅಂಬೇಡ್ಕರ್ ಸಂವಿಧಾನ ಬರೆಯಲು ಬಸವಾದಿ ಶರಣರ ವಚನಗಳೂ ಕೂಡ ಪ್ರೇರಕವಾದವು ಎಂದು ಹೇಳಿದರು.

ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡಿದ ಕುಶಾಲನಗರ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಬಸವಣ್ಣನು ಕಟ್ಟಿದ ಅನುಭವ ಮಂಟಪಕ್ಕೆ ಅಂದು ದೇಶ ವಿದೇಶಗಳಿಂದ ಬರುತ್ತಿದ್ದ ಶರಣರಿಗೆ ಬಟ್ಟೆಗಳನ್ನು ಹಾಸಿ ಸ್ವಾಗತಿಸಿ ಅವರನ್ನು ಪರೀಕ್ಷಿಸುತ್ತಿದ್ದ ಮಡಿವಾಳ ಮಾಚಿದೇವರು, ಬಸವಣ್ಣನಿಗಿಂತ ಹಿರಿಯರಾದರೂ ಅವರ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅರಸುತನ ಮೇಲಲ್ಲ - ಅಗಸತನ ಕೀಳಲ್ಲ ಎನ್ನುವ ಮೂಲಕ ಸತ್ಯ ಶುದ್ಧವಾದ ಕಾಯಕಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ಅಂದಿನ ಶರಣರು ಕಲ್ಪಿಸಿದ್ದರು. ಕಾಯಕ ಮಾಡದೇ ಏನನ್ನೂ ಕೂಡ ಶರಣರು ಪಡೆದವರಲ್ಲ ಎಂದು ಆಯ್ದಕ್ಕಿ ಲಕ್ಕಮ್ಮ ಹಾಗೂ ಅಯ್ದಕ್ಕಿ ಮಾರಯ್ಯರ ಸಂಗತಿಯನ್ನೂ ಹೇಮಲತಾ ವಿಶ್ಲೇಷಿಸಿದರು.

ಮುಖ್ಯ ಅತಿಥಿಯಾಗಿದ್ದ ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ. ವೆಂಕಟನಾಯಕ್ ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳನ್ನು ವ್ಯಾಖ್ಯಾನಿಸಿದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕÀ ಶ್ರೀಕಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಬಸವಾದಿ ಶರಣರ ವಿಚಾರಧಾರೆಗಳನ್ನು ಅರಿತು ಅವರ ಆಶಯದಂತೆ ನಡೆಯುವ ದಿಟ್ಟ ನಿಲುವು ಕೈಗೊಂಡಾಗ ಮಾತ್ರ ಸಮಾಜದಲ್ಲಿ ಇಂದು ಘಟಿಸುತ್ತಿರುವ ಲಂಚಗುಳಿತನ, ಮೋಸ, ವಂಚನೆಗಳನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದರು.

ಹರದೂರು ಗ್ರಾಪಂ ಅಭಿವೃದ್ದಿ ಅಧಿಕಾರಿ ಡಿ. ವೀಣಾ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪರಿಷತ್ತಿನ ಕೋಶಾಧಿಕಾರಿ ಪರಮೇಶ್, ಕದಳಿ ವೇದಿಕೆ ಗೌರವಾಧ್ಯಕ್ಷೆ ವಿಜಯಾ ಪಾಲಾಕ್ಷ, ನಿರ್ದೇಶಕರಾದ ಸರೋಜಾ ಆರಾಧ್ಯ, ಪುಷ್ಪ ಹೇಮಣ್ಣಾ, ಶಿಲ್ಪಾ ಲೋಕೇಶ್, ನಂದಿನಿ ಸುಬ್ಬಯ್ಯ ಇದ್ದರು.