ಹಿರಿಯೂರು: ಕಾನೂನು ಸಲಹೆ ಮೂಲಕ ಸರ್ಕಾರ-ಸದನದ ಒಪ್ಪಿಗೆ ಪಡೆದು ಒಳಮೀಸಲು ಸೌಲಭ್ಯ ಜಾರಿಗೆ ಪ್ರಯತ್ನ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಮಾದಿಗ ಸಮುದಾಯ ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಮಾದಿಗ ಸಮುದಾಯದ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಉತ್ತಮ ಶಿಕ್ಷಣ ಪಡೆದು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಢತೆ ಸಾಧಿಸಬೇಕು ಎಂದರು.
ಐದು ಗ್ಯಾರಂಟಿ ಯೋಜನೆಗಳ ಜಾರಿ ದೇಶದಲ್ಲಿ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ, ಕೊಟ್ಟ ಮಾತು ಉಳಿಸಿಕೊಳ್ಳಲು 3 ಕೋಟಿ 40 ಲಕ್ಷ ಮಂದಿಗೆ ಅಕ್ಕಿ ಬದಲು ಹಣ ಸಂದಾಯ ಮಾಡಿದ್ದೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಶ್ರಮ ಸಂಸ್ಕೃತಿಯ ಪ್ರತೀಕ ಮಾದಿಗ ಸಮುದಾಯದ ಪ್ರಗತಿಗೆ ಅಗತ್ಯ ಅನುದಾನ ನೀಡಲಾಗುವುದು.
ಸಾಮಾಜಿಕ ನ್ಯಾಯ ಸಿದ್ಧಾಂತ ಪರ ಇರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸರ್ವಸ್ಪರ್ಶಿ ಆಡಳಿತ ಸಂಕಲ್ಪದ ಮೂಲಕ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಸರ್ಕಾರದ ಯೋಜನೆಗಳನ್ನು ಮಾದಿಗ ಸಮುದಾಯದ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಹಿರಿಯೂರು ಕ್ಷೇತ್ರದಲ್ಲಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ಮಾದಿಗ ಸಮುದಾಯ ಅಭಿವೃದ್ಧಿ ಕಡೆ ಸಾಗಲು ಜಾಗೃತರಾಗಬೇಕು, ಸರ್ಕಾರದ ಸೌಲಭ್ಯ ಪಡೆದು ಸಮಾಜದಲ್ಲಿ ಸಶಕ್ತರಾಗಬೇಕು ಎಂದು ಹೇಳಿದರು.
ಕೆಪಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವನ್ನು ಬೆಂಬಲಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಸಮುದಾಯದ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಆನೆ ಬಲ ಬರಲಿದೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಿಂತಕ ನಿಖಿತ್‌ರಾಜ್ ಮೌರ್ಯ ಇತರರು ಮಾತನಾಡಿದರು.
ಸ್ಥಳೀಯ ಮಾದಿಗರಿಗೆ ‘ಕೈ’ ಕೆಟ್‌ಗೆ ಪಟ್ಟು: ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿದ್ದು, ಕ್ಷೇತ್ರದಲ್ಲಿ ಮಾದಿಗ ಸಮುದಾಯ ಬಹುಸಂಖ್ಯಾತರು.
ಜತೆಗೆ ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಮಾದಿಗ ಸಮುದಾಯದ ಸ್ಥಳೀಯ ಹಾಗೂ ಪಕ್ಷ ನಿಷ್ಠ ಯುವಕನಿಗೆ ಟಿಕೆಟ್ ನೀಡಬೇಕು.
ಈ ನಿಟ್ಟಿನಲ್ಲಿ ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ರಾಜ್ಯ ಮಾದಿಗ ಮಹಾಸಭಾ ಪದಾಧಿಕಾರಿಗಳು ಸಚಿವರುಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ, ಬಿ.ಧನಂಜಯಕುಮಾರ್, ಖಂಡೇನಹಳ್ಳಿ ಡಿ.ಚಿದಾನಂದ್, ವಿ.ಕೆ.ಗುಡ್ಡ ಮಹಲಿಂಗಪ್ಪ, ರಂಗಸ್ವಾಮಿ,
ಶಿವಕುಮಾರ್, ಜಿಪಂ ಮಾಜಿ ಸದಸ್ಯೆ ಗೀತಾ, ತಾಪಂ ಮಾಜಿ ಅಧ್ಯಕ್ಷೆ ಡಾ.ಜೆ.ಆರ್.ಸುಜಾತಾ, ಮಾಜಿ ಸದಸ್ಯರಾದ ತಿಪ್ಪಮ್ಮ, ಓಂಕಾರಪ್ಪ, ಟಿ.ನಾಗರಾಜ್, ಮೈಲಾರಪ್ಪ ಇತರರಿದ್ದರು.