ಜಿಲ್ಲೆ

"ವರ್ಗೀಕರಣ ಮಾಡ್ತೀರಾ, ರಾಜೀನಾಮೆ ಕೊಡ್ತೀರಾ? "

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ನ್ಯಾಯಮೂರ್ತಿ ನಾಗಮೋಹನದಾಸ್​ ಆಯೋಗದ ವರದಿ ಪಡೆದು ಆಗಸ್ಟ್​ 15ರೊಳಗೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟಿಸಲಾಯಿತು. "ವರ್ಗೀಕರಣ ಮಾಡ್ತೀರಾ, ರಾಜೀನಾಮೆ ಕೊಡ್ತೀರಾ? ' ಎಂಬ ಘೋಷಣೆಗಳು ಈ ಸಂದರ್ಭದಲ್ಲಿ ಮೊಳಗಿದವು.

ನಗರದ ಟೌನ್​ ಹಾಲ್​ ಮುಂಭಾಗದ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿ ಬಳಿ ಸಮಾವೇಶಗೊಂಡ ವಿವಿಧ ಮಾದಿಗ ಸಂಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಕೈಗೊಂಡು, ರಾಜ್ಯ ಸರ್ಕಾರವು ವಿಳಂಬ ನೀತಿ ಅನುಸರಿಸಿ ಒಳಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದೆ. ಇನ್ನಾದರು ನಮ್ಮ ಹೋರಾಟಕ್ಕೆ ಸ್ಪಂದಿಸುವಂತೆ ಆಗ್ರಸುವಂತೆ ಒತ್ತಾಯಿಸಿದರು.

ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ವೈ.ಎಚ್​.ಹುಚ್ಚಯ್ಯ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ, ಮೆದುಳು ಇಲ್ಲ. ಸರ್ಕಾರದ ಪಂಚೇಂದ್ರಿಯಗಳು ಕೆಲಸ ಮಾಡುತ್ತಿಲ್ಲ. ಒಳಮೀಸಲಾತಿಯನ್ನು ಮಾದಿಗರಿಗೆ ಮಾತ್ರ ಕೊಡಿ ಎಂದು ಕೇಳುತ್ತಿಲ್ಲ, ಪರಿಶಿಷ್ಟ ಜಾತಿಯೊಳಗಿನ 101 ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಂಡು, ದತ್ತಾಂಶ ಕ್ರೂಢಿಕರಿಸಿ ಜನಸಂಖ್ಯಾ ಅನುಸಾರ ಒಳಮೀಸಲಾತಿ ನೀಡಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿಯ ಎಲ್ಲಾ ಉಪ ಜಾತಿಗಳಿಗೂ ನ್ಯಾಯ ದೊರಕುವಂತಾಗುತ್ತದೆ ಎಂಬುದು ಮುಖ್ಯಮಂತ್ರಿಗಳಿಗೂ ಗೊತ್ತು. ಆದರೆ, ಸರ್ಕಾರದ ಸಚಿವರಾಗಿರುವ ಡಾ.ಎಚ್​.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ, ರ್ಖಗೆಯಂತಹ ಕೆಲವರ ಮುಷ್ಠಿಯಲ್ಲಿ ಸಿಲುಕಿ ಸಿದ್ದರಾಮಯ್ಯ ನಮಗೆ ನ್ಯಾಯ ಕೊಡುವಲ್ಲಿ ಅಸಹಾಯಕರಾಗಿದ್ದಾರೆ. 15ರೊಳಗೆ ಒಳಮೀಸಲಾತಿ ಜಾತಿಗೆ ತೀಮಾರ್ನ ಮಾಡಬೇಕು, ಇಲ್ಲವಾದರೆ 16ರಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿ ಮಂತ್ರಿಗಳನ್ನು ಪ್ರವಾಸದ ವೇಳೆ ಅಡ್ಡಗಟ್ಟಿ ಹೋರಾಟ ಮಾಡುತ್ತೇವೆ. ಉಗ್ರ ಸ್ವರೂಪದ ಹೋರಾಟದಲ್ಲಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

15 ರಂದು ಕರಾಳ ದಿನ: ಒಳಮೀಸಲಾತಿ ಜಾರಿಗೆ ಆಗಸ್ಟ್​ 15ರಂದು ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಜಾರಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಸ್ವಾತಂತ್ರ್ಯ ದಿನವನ್ನು ಕರಾಳ ದಿನವಾಗಿ ಆಚರಿಸುತ್ತೇವೆ. ಅಂದು ಸಂಜೆ ಪಂಜಿನ ಮೆರವಣಿಗೆ ಮಾಡುತ್ತೇವೆ. 16ರಿಂದ ಯಾವುದೇ ಸಚಿವರು ಪ್ರವಾಸಕ್ಕೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕುತ್ತೇವೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಬಿ.ಎಚ್​.ಅನಿಲ್​ಕುಮಾರ್​ ಹೇಳಿದರು.

ಈ ಸಂಬಂಧ ಗಡುವು ಘೋಷಣೆ ಮಾಡಿದ ನಂತರ ಸಚಿವ ಪರಮೇಶ್ವರ್​, ಪರಿಶಿಷ್ಟ ಜಾತಿ, ಪಂಗಡದ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ಇದೊಂದು ಕಣ್ಣೊರೆಸುವ ತಂತ್ರವಾಗಿದೆ. ಪರಮೇಶ್ವರ್​ ಯಾವತ್ತೂ ಒಳಮೀಸಲಾತಿಯನ್ನು ಬೆಂಬಲಿಸುವುದಿಲ್ಲ, ಅವರು ಒಳಮೀಸಲಾತಿಯ ವಿರೋಧಿ. ಒಳಮೀಸಲಾತಿ ಜಾರಿ ಮಾಡಿದರೆ ಉಳಿಯುತ್ತೀರಿ ಇಲ್ಲವಾದರೆ ಅಧಿಕಾರದಿಂದ ಇಳಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪಾವಗಡ ಶ್ರೀರಾಮ್​ ಮಾತನಾಡಿ, ಒಳಮೀಸಲಾತಿ ಜಾರಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ. ವರ್ಗೀಕರಣ ಮಾಡಿ ಇಲ್ಲವೆ ರಾಜೀನಾಮೇ ಕೊಡಿ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಆದರೆ, ರಾಜ್ಯ ಕಾಂಗ್ರೆಸ್​ ಸರ್ಕಾರ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಹರಿಹಾಯ್ದರು.

ಹೊಳಕಲ್​ ಗ್ರಾಪಂಅಧ್ಯಕ್ಷ ಎಚ್​.ಎ.ಆಂಜನಪ್ಪ, ಮುಖಂಡರಾದ ಜೆ.ಎನ್​.ರಾಜಸಿಂಹ, ಪಿ.ಎನ್​.ರಾಮಯ್ಯ, ರವಿವರ್ಮಕುಮಾರ್​, ಶಿವಶಂಕರ್​, ಹುಲ್ಲೂರು ನಾಗೇಶ್​, ಲಕ್ಷ್ಮಿಪತಿ, ರಘು ದಾಸಲುಕುಂಟೆ, ಲಕ್ಷ್ಮಿನರಸಪ್ಪ, ಹೊಸಕೋಟೆ ನಟರಾಜು, ಆಂಜನಮೂರ್ತಿ, ದಾಡಿ ವೆಂಕಟೇಶ್​, ರಮೇಶ್​ ಯಲ್ಲಾಪುರ, ವೆಂಕಟೇಶ್​, ನರಸಿಂಹಮೂರ್ತಿ, ನಾರಾಯಣ್​, ಲಕ್ಕೇನಹಳ್ಳಿ ದಾಸಪ್ಪ, ಸೋರೆಕುಂಟೆ ಯೋಗೀಶ್​ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.