ನರಗುಂದ: ತಾಲೂಕಿನ ಸುರಕೋಡ ಅಂಗನವಾಡಿ ಕೇಂದ್ರಕ್ಕೆ ಕಾನೂನು ಬಾಹಿರ ಕಾರ್ಯಕರ್ತೆ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಮಿನಿವಿಧಾನ ಸೌಧ ಕಚೇರಿ ಎದುರು ಮಾದಿಗ ಸಮಾಜದವರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ನ್ಯಾಯೋಚಿತ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಸುರಕೋಡದ ಅಂಗನವಾಡಿ ಕೇಂದ್ರ ಸಂಖ್ಯೆ 38ರ ಕಾರ್ಯಕರ್ತೆಯನ್ನು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘಿಸಿ ನೇಮಿಸಿಕೊಳ್ಳಲಾಗಿದೆ. ಅಧಿಕಾರಿಗಳ ಹಸ್ತಕ್ಷೇಪದಿಂದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಧರಣಿ ಮುಂದುವರಿಸಿದ್ದರು. ಮಂಗಳವಾರ ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಶೈಲ ತಳವಾರ ಹಾಗೂ ಸಿಡಿಪಿಒ ಕಮಲಾ ಹುಲಕೋಟಿ ಅವರು, ಈ ವಿಷಯದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದಲ್ಲದೆ, ಅಧಿಕಾರಿಗಳ ಆದೇಶದಂತೆ ಇಲ್ಲಿನ ಕೇಂದ್ರಕ್ಕೆ ಕಾರ್ಯಕರ್ತೆಯನ್ನು ನೇಮಕಗೊಳಿಸಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಅಂತಿಮ ಸರ್ವೆ ವರದಿ ನೀಡಲಾಗುವುದು ಎಂದು ತಿಳಿಸಿದ್ದರಿಂದ ಅಹೋರಾತ್ರಿ ಧರಣಿ ಹಿಂಪಡೆದರು.
ಕರ್ನಾಟಕ ಮಾದಿಗ ಸಮಾಜದ ಅಧ್ಯಕ್ಷ ಮುತ್ತು ಸುರಕೋಡ ಮಾತನಾಡಿ, ಸರ್ವೆ ನಂತರವೂ ನ್ಯಾಯ ಒದಗದಿದ್ದಲ್ಲಿ ಮತ್ತೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹನುಮಂತ ಮಾದರ, ಯಲ್ಲಪ್ಪ ಹೊಸಮನಿ, ಸುರೇಶ ಬಾಬರ, ಮುತ್ತು ಪೂಜಾರ, ಶಿವಾನಂದ ಮಾದರ, ವಿಠಲ ಮಾದರ, ಶಿವಾನಂದ ಸುರಕೋಡ, ಶಿವಾನಂದ ತಳವಾರ, ಶಿವಾನಂದ ಬನಹಟ್ಟಿ, ಇತರರು ಉಪಸ್ಥಿತರಿದ್ದರು.