ಜಿಲ್ಲೆ

ಹಿತಮಿತ ಆಹಾರದಿಂದ ಆರೋಗ್ಯ ಪ್ರಾಪ್ತಿ : ಸುದರ್ಶನ ಜೋಯಿಸ ಅಭಿಮತ

ಸೌಮ್ಯ ಆರ್

ಸುಬ್ರಹ್ಮಣ್ಯ: ನಾವು ದಿನನಿತ್ಯ ಸೇವಿಸುವ ಆಹಾರದಿಂದಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದು ಸಾಮಾನ್ಯವಾಗಿದೆ. ಉತ್ತಮವಾದ ಹಾಗೂ ಪರಿಮಿತವಾದ ಆಹಾರ ಸೇವಿಸಿದಾಗ ನಮ್ಮ ಆರೋಗ್ಯ ಸ್ಥಿತಿ ಸುಧಾರಿಸಿಕೊಳ್ಳುತ್ತದೆ. ಮಿತವಾದ ಆಹಾರ ಸೇವನೆಯಿಂದ ಆರೋಗ್ಯ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಹಾರ ಸೇವನೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಹೇಳಿದರು.

ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗಡೆ ಚಾರಿಟೆಬಲ್ ಟ್ರಸ್ಟ್ ದೇರಳಕಟ್ಟೆ ಮಂಗಳೂರು ಆಶ್ರಯದಲ್ಲಿ ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರದಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್, ಸುಬ್ರಹ್ಮಣ್ಯ ಗ್ರಾಪಂ, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಇವುಗಳ ಜಂಟಿ ಆಶಯದಲ್ಲಿ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ.ಸತೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ದೇರಳಕಟ್ಟೆ ಕ್ಷೇಮದ ರೂರಲ್ ಹೆಲ್ತ್ ಸೆಂಟರ್ ಕೋ-ಆರ್ಡಿನೇಟರ್ ಡಾ.ರಾಘವೇಂದ್ರ ಹುಚ್ಚಣ್ಣನವರ್, ಚರ್ಮರೋಗ ತಜ್ಞ ಡಾ.ಗಿರೀಶ್, ಫಿಜಿಷಿಯನ್ ಚೇತನ್ ಸುಬ್ರಹ್ಮಣ್ಯ, ಈ ಆ್ಯಂಡ್ ಟಿ., ಸರ್ಜನ್ ಡಾ.ವಾದೀಶ್ ಭಟ್, ಆಪ್ತಮಜಲಿಸ್ಟ್ ಡಾ.ವೈಶಾಖ ಶೆಟ್ಟಿ, ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಕ್ರಮ ಶೆಟ್ಟಿ, ದಂತ ವೈದ್ಯಾಧಿಕಾರಿ ಡಾ.ಚರಣ್ ಶೆಟ್ಟಿ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಇನ್ನರ್‌ವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ವಿಮಲಾ ರಂಗಯ್ಯ, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಸೀನಿಯರ್ ಚೇಂಬರ್ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ ಇದ್ದರು.

ಸದಾನಂದ ಆಸ್ಪತ್ರೆಯ ಸಿಬ್ಬಂದಿ ಮೋಹನ ಪಳ್ಳಿಗದ್ದೆ ವಂದಿಸಿದರು. ಶಿಬಿರದಲ್ಲಿ 300ಕ್ಕೂ ಅಧಿಕ ಸುಬ್ರಹ್ಮಣ್ಯ ಆಸುಪಾಸಿನ ಊರುಗಳಿಂದ ಬಂದ ಫಲಾನುಭವಿಗಳು ಕಿವಿ, ಮೂಗು, ಗಂಟಲು ಪರೀಕ್ಷೆ, ಚರ್ಮರೋಗ ಪರೀಕ್ಷೆ, ಸ್ತ್ರೀರೋಗ ಪರೀಕ್ಷೆ, ದಂತ ಪರೀಕ್ಷೆ, ಬಿಪಿ, ಶುಗರ್, ರಕ್ತ ಪರೀಕ್ಷೆ ಹಾಗೂ ಸಾಮಾನ್ಯ ರೋಗಗಳ ಪರೀಕ್ಷೆ ಮಾಡಿಸಿ ಔಷಧಗಳನ್ನು ಪಡೆದುಕೊಂಡರು.