ಮೈಸೂರು: ಮಧ್ವಾಚಾರ್ಯರ ಜೀವನದ ಪ್ರತಿಯೊಂದು ಘಟ್ಟವೂ ದಿವ್ಯ ತತ್ವಗಳ ಸಂದೇಶವಾಗಿವೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ, ಜಗದ್ಗುರು ಶ್ರೀ ಮಧ್ವಾಚಾರ್ಯ ಜಯಂತ್ಯುತ್ಸವ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಮಧ್ವಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ರಾಜ್ಯ ಸರ್ಕಾರ ಮೊದಲ ಬಾರಿಗೆ ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಅವಕಾಶ ನೀಡಿರುವುದು ಅತ್ಯಂತ ಶ್ಲಾಘನೀಯ. ಈ ಐತಿಹಾಸಿಕ ನಿರ್ಧಾರಕ್ಕಾಗಿ ನಾವೆಲ್ಲರೂ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸೋಣ ಎಂದು ಹೇಳಿದರು.
ಮೈಸೂರು ಕೇವಲ ಪ್ರವಾಸಿ ತಾಣವಲ್ಲ, ಇದೊಂದು ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ನಗರಿಯಾಗಿದೆ. ಇಲ್ಲಿ ವರ್ಷಪೂರ್ತಿ ಹಲವಾರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇಂದಿನ ಈ ಮಧ್ವಾಚಾರ್ಯರ ದಿನಾಚರಣೆಗೆ ಸಾರ್ವಜನಿಕರು ಹಾಗೂ ಭಕ್ತರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಸನಾತನ ಧರ್ಮದ ಬೇರುಗಳು ಅತ್ಯಂತ ಗಟ್ಟಿಯಾಗಿ ನಿಂತಿವೆ. ಇಂದಿನ ಆಧುನಿಕ ಯುಗದಲ್ಲೂ ನಮ್ಮ ಯುವ ಪೀಳಿಗೆ ಸಂಸ್ಕೃತಿಯತ್ತ ಮುಖ ಮಾಡಿರುವುದು ಹೆಮ್ಮೆಯ ವಿಷಯ. ನಗರದಲ್ಲಿ 8ನೇ ತರಗತಿಗಿಂತ ಮೇಲ್ಪಟ್ಟ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜತೆಗೆ ವೇದಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ಮೈಸೂರಿನ ಆಧ್ಯಾತ್ಮಿಕ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಮಾತನಾಡಿ, ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯಲ್ಲಿ 13ನೇ ಶತಮಾನವು ಅತ್ಯಂತ ಮಹತ್ವದ್ದು. ವಾಸುದೇವ ಎಂಬ ನಾಮಧೇಯದೊಂದಿಗೆ ಅವತರಿಸಿದ ಶ್ರೀ ಮಧ್ವಾಚಾರ್ಯರು ಮುಂದೆ ಆನಂದತೀರ್ಥರಾಗಿ, ಪೂರ್ಣಪ್ರಜ್ಞರಾಗಿ ಇಡೀ ವಿಶ್ವಕ್ಕೆ ದ್ವೈತ ಸಿದ್ಧಾಂತದ ಬೆಳಕನ್ನು ನೀಡಿದರು ಎಂದು ಹೇಳಿದರು.
ಶ್ರೀ ಮಧ್ವಾಚಾರ್ಯರ ತತ್ವಶಾಸ್ತ್ರದ ಜೀವಾಳವೇ ದ್ವೈತ ಅಥವಾ ತತ್ವವಾದ. ಪರಮಾತ್ಮನಾದ ಶ್ರೀಹರಿಯು ಸರ್ವೋತ್ತಮನು ಸ್ವತಂತ್ರನು. ಜೀವಾತ್ಮರು ಮತ್ತು ಪ್ರಕೃತಿಯು ಆ ಪರಮಾತ್ಮನ ಅಧೀನದಲ್ಲಿರುವಂತಹವು ಎಂಬ ಸತ್ಯವನ್ನು ಅವರು ಅತ್ಯಂತ ತರ್ಕಬದ್ಧವಾಗಿ ಮತ್ತು ವೇದ-ಉಪನಿಷತ್ತುಗಳ ಆಧಾರದ ಮೇಲೆ ಪ್ರತಿಪಾದಿಸಿದರು. ಕೇವಲ ಕಠಿಣವಾದ ತತ್ವಶಾಸ್ತ್ರವಷ್ಟೇ ಅಲ್ಲ ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಕ್ತಿ ಮಾರ್ಗವನ್ನು ಅವರು ತೋರಿಸಿಕೊಟ್ಟರು ಎಂದು ತಿಳಿಸಿದರು.
ಮಧ್ವಾಚಾರ್ಯರ ಕೊಡುಗೆ ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳಿಗಾಗಿ ಅಷ್ಟಮಠಗಳನ್ನು ಸ್ಥಾಪಿಸಿದರು. ಇಂದಿಗೂ ಉಡುಪಿಯ ಪರ್ಯಾಯ ವ್ಯವಸ್ಥೆಯು ಆಡಳಿತ ಮತ್ತು ಶಿಸ್ತಿಗೆ ಒಂದು ಅದ್ಭುತ ಮಾದರಿಯಾಗಿ ನಿಂತಿದೆ ಎಂದರು.
ಇಂದಿನ ಆಧುನಿಕ ಮತ್ತು ಒತ್ತಡದ ಜೀವನದಲ್ಲಿ ನಮಗೆ ಶ್ರೀ ಮಧ್ವಾಚಾರ್ಯರ ಸಂದೇಶಗಳು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಯಾವುದೇ ಕೆಲಸವನ್ನು ಮಾಡುವಾಗಲೂ ಅದು ಭಗವಂತನ ಪೂಜೆ ಎಂಬ ಭಾವನೆಯಿಂದ ಮಾಡು ಎಂಬ ಅವರ ಮಾತು, ನಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯನ್ನು ತರುತ್ತದೆ. ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳ ಸಮನ್ವಯವೇ ನಿಜವಾದ ಜೀವನ ಎಂಬುದನ್ನು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರವಚನಕಾರ ಬಾದಾರಾಯಣಚಾರ್ಯ ಮಾತನಾಡಿ, ಮನುಷ್ಯನ ವಿಕಾಸಕ್ಕೆ ಜ್ಞಾನವೇ ಮೂಲಾಧಾರ. ಇಂತಹ ಪವಿತ್ರ ಜ್ಞಾನವನ್ನು ಮನುಕುಲಕ್ಕೆ ಧಾರೆಯೆರೆಯಲು ಹಾಗೂ ಲೋಕಕಲ್ಯಾಣಕ್ಕಾಗಿಯೇ ಸಾಕ್ಷಾತ್ ಪರಬ್ರಹ್ಮ ನಾರಾಯಣನ ಅವತಾರವೆಂದೇ ನಂಬಲಾದ ಶ್ರೀ ಮಧ್ವಾಚಾರ್ಯರು ಉಡುಪಿಯ ಪವಿತ್ರ ಪಾಜಕ ಕ್ಷೇತ್ರದಲ್ಲಿ ಅವತರಿಸಿದರು ಎಂದರು.
ಜ್ಞಾನವೆಂಬುದು ಅತ್ಯಂತ ಪವಿತ್ರವಾದ ವಸ್ತು. ಜ್ಞಾನವನ್ನು ಪಡೆದಾಗಲೇ ಮನುಷ್ಯ ಪರಿಪೂರ್ಣನಾಗುತ್ತಾನೆ. ಅಂತಹ ಮಾನವ ಕುಲದ ಶ್ರೇಯಸ್ಸಿಗಾಗಿ ಮಧ್ವಾಚಾರ್ಯರು ಶ್ರಮಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ವೇದ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ ಮೂಲಕ ತಮ್ಮ ಗುರುಗಳನ್ನೇ ಬೆರಗುಗೊಳಿಸಿದ ಅಸಾಧಾರಣ ಚೇತನ ಮಧ್ವಾಚಾರ್ಯರದ್ದು. ಕನ್ನಡಿಯಂತೆ ಸಕಲ ಸದ್ಗುಣಗಳನ್ನು ತಮ್ಮ ಅವತಾರದಲ್ಲಿ ಪ್ರತಿಬಿಂಬಿಸಿದ ಅವರು ಸದಾ ಸಕಲ ಜನರಿಗೂ ಉಪಕಾರ ಮಾಡುವ ಉದಾತ್ತ ಮನಸ್ಥಿತಿಯನ್ನು ಹೊಂದಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಇತರರು ಇದ್ದರು.