ಪುತ್ತಿಗೆ ಶ್ರೀಪಾದರಿಂದ ವಿಶೇಷ ಪೂಜೆ
ಆಚಾರ್ಯರಿಗೆ ದಂಡೋದಕ ಪ್ರದಾನ
ಉಡುಪಿಯ ಅನಂತೇಶ್ವರ ದೇವಸ್ಥಾನದ ಶ್ರೀಮನ್ ಮಧ್ವಾಚಾರ್ಯರ ಅದೃಶ್ಯ ಸನ್ನಿಧಿಯಲ್ಲಿ ಹಾಗೂ ಶ್ರೀಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವವನ್ನು ಗುರುವಾರ ವೈಭವದಿಂದ ಆಚರಿಸಲಾಯಿತು.
ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಸುಗುಣೇದ್ರ ತೀರ್ಥ ಶ್ರೀಪಾದರು ಹಾಗೂ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿ- ವಿಧಾನ ನೆರವೇರಿಸಲಾಯಿತು. ಮಧ್ವ ನವಮಿ ನಿಮಿತ್ತ ಶ್ರೀಕೃಷ್ಣ ಮಠ ಹಾಗೂ ಅನಂತೇಶ್ವರ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ದಂಡೋದಕ ಪ್ರದಾನ
ಶ್ರೀ ಅನಂತೇಶ್ವರ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ನೂರಾರು ವಿಪ್ರ ಬಾಂಧವರು ಪಾರಾಯಣ ಪಠಿಸಿದರು. ಪರ್ಯಾಯ ಶ್ರೀಪಾದರು ವಾಯುಸ್ತುತಿ ಪಾರಾಯಣದೊಂದಿಗೆ ಮಧು ಅಭಿಷೇಕ ಮಾಡಿದರು. ಉಭಯ ಶ್ರೀಪಾದರು ಮಹಾಪೂಜೆ ಮಾಡಿ, ಆಚಾರ್ಯ ಮಧ್ವರಿಗೆ ದಂಡೋದಕ ಪ್ರದಾನ ಮಾಡಿದರು.
ಪ್ರಾಣ ದೇವರಿಗೆ ಮಧ್ವರ ಅಲಂಕಾರ
ಮಧ್ವ ಮಂಟಪದಲ್ಲಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಷ್ಣು ಸಹಸ್ರನಾಮ ಚಿಂತನೆ ಮತ್ತು ವಿಪ್ರರಿಂದ ಪಾರಾಯಣ ನಡೆಯಿತು. ಆಚಾರ್ಯ ಮಧ್ವರು ಹನುಮಂತ ದೇವರ ಅವತಾರದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಪ್ರಾಣದೇವರಿಗೆ ಆಚಾರ್ಯ ಮಧ್ವರ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತರು ಆ ವೈಭವ ಕಣ್ತುಂಬಿಕೊಂಡರು. ಸುಶ್ರೀಂದ್ರ ಶ್ರೀಗಳು ಉಡುಪಿ ಶ್ರೀಕೃಷ್ಣನಿಗೆ 'ಶ್ರೀ ಗೋಪಾಲಕೃಷ್ಣ'ನ ಅಲಂಕಾರ ಮಾಡಿದ್ದು, ಹಿರಿಯ ಶ್ರೀಗಳು ಮಹಾಪೂಜೆ ನೆರವೇರಿಸಿದರು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.
ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಮಠದ ದಿವಾನ ನಾಗರಾಜ್ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ರತೀಶ್ ತಂತ್ರಿ, ವಿಷ್ಣುಮೂರ್ತಿ, ವಿದ್ವಾನ್ ಡಾ. ಬಿ.ಗೋಪಾಲ್ ಆಚಾರ್ಯ, ರಮೇಶ್ ಭಟ್, ರವೀಂದ್ರ ಆಚಾಯ, ತು.ಶಿ.ಮಾ.ಮ. ಸದಸ್ಯರು, ವಿವಿಧ ಬ್ರಾಹ್ಮಣ ಸಂಘದ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.
ಪಾಪ ನಿವಾರಕ ಪುಣ್ಯತಮ ತಾಣ
ಅನಂತೇಶ್ವರ ದೇಗುಲದಲ್ಲಿ ಆಶೀರ್ವಚನ ನೀಡಿದ ಸುಗುಣೇಂದ್ರ ಶ್ರೀ, ಉಡುಪಿಯ ಅನಂತೇಶ್ವರ ದೇಗುಲವು ಅತ್ಯಂತ ಶ್ರೇಷ್ಠವಾದ ಮಂದಿರವಾಗಿದೆ. ಬದರಿ ನಾರಾಯಣ, ಅನಂತ ಪದ್ಮನಾಭ, ಪರಶುರಾಮ ದೇವರು, ರುದ್ರ ದೇವರು, ಅವತಾರ ತ್ರಯ ಆಚಾರ್ಯರನ್ನು ಒಳಗೊಂಡ ದಿವ್ಯ ಸನ್ನಿಧಿಯಾಗಿದೆ. ಇದು ನಿಜಕ್ಕೂ ದೊಡ್ಡ ಕುಂಭಮೇಳ ಹೊಂದಿದ ತಾಣವಾಗಿದೆ. ಎಲ್ಲಿ ನಾರಾಯಣ ಇರುತ್ತಾನೆಯೋ ಅಲ್ಲಿ ವಾಯು ದೇವರೂ ಇರುತ್ತಾರೆ. ಹೀಗಾಗಿಯೇ ಈ ಪವಿತ್ರ ಸ್ಥಳವನ್ನೇ ಶ್ರೀಮದಾಚಾರ್ಯರು ಅದೃಶ್ಯರಾಗಲೂ ಬಳಸಿಕೊಂಡರು. ಅವರ ಮೂರ್ತಿ ಇಲ್ಲಿ ಇಲ್ಲದಿದ್ದರೂ ಸಹ ಅವರ ವಿಶೇಷ ಸನ್ನಿಧಾನ ಇದಾಗಿದೆ. ಅನಂತೇಶ್ವರ ದೇಗುಲ ಪ್ರದಕ್ಷಿಣೆ ಹಾಕಿದರೆ ಎಲ್ಲ ದೇವರನ್ನೂ ಪ್ರದಕ್ಷಿಣೆ ಮಾಡಿದ ಪುಣ್ಯ ಲಭಿಸುತ್ತದೆ. ಸಕಲ ಪಾಪ ನಿವಾರಣೆಯಾಗುತ್ತದೆ ಎಂದರು.