ತುಮಕೂರು : ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳನ್ನು ಸ್ವೀಕರಿಸಲು ಹಾಗೂ ಅಳವಡಿಸಿಕೊಳ್ಳಲು ಹೊಸ ತಲೆಮಾರಿನ ಯುವಕರು ಸಿದ್ಧರಿರಬೇಕು. ತನ್ಮೂಲಕ ಸಾಮಾಜಿಕ ಒಳಿತಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತುಮಕೂರು ವಿವಿಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶನಿವಾರ ವಿವಿಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಸಂಘಟನಾತ್ಮಕ ಪರಿಣಾಮಕಾರಿತನದ ವಾಹಕವಾಗಿ ಡಿಜಿಟಲೀಕರಣ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಸಬಲೀಕರಣಗೊಳಿಸಿ ಜನತೆಯನ್ನು ಜವಾಬ್ದಾರಿಯುತರನ್ನಾಗಿಸುವುದು ಶಿಕ್ಷಣದ ಕಾರ್ಯ. ಎಲ್ಲವನ್ನೂ ಕಂಪ್ಯೂಟರುಗಳು ನಿರ್ಧರಿಸುವ ಈ ಕಾಲದಲ್ಲಿ ಹೊಸ ತಿಳಿವಳಿಕೆಗಾಗಿ ಮನಸ್ಸನ್ನು ಸದಾ ಮುಕ್ತವಾಗಿರಿಸಿಕೊಂಡಿರಬೇಕು ಎಂದರು.
ಹೈದರಾಬಾದಿನ ರಿಮೋಟ್ ಸೆನ್ಸಿಂಗ್ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ವಿಸ್ತೃತ ಕ್ಷೇತ್ರಕಾರ್ಯ ನಡೆಸಿ ಆ್ಯಪ್ ಅಭಿವೃದ್ಧಿಪಡಿಸಿದೆ. ಅದರ ಮೂಲಕ ರೈತರು ಈಗ ತಮ್ಮ ಜಮೀನಿನ ಯಾವ ಭಾಗದಲ್ಲಿ ನೀರಿನ ಲಭ್ಯತೆ ಇದೆ ಎಂದು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಇದು ನಿಜವಾಗಿಯೂ ಸಮಾಜಕ್ಕೆ ಅತ್ಯುಪಯುಕ್ತ ಸಂಶೋಧನೆ ಎಂದು ಜೆಸಿಎಂ ಹೇಳಿದರು.
ಪರೀಕ್ಷಾರಹಿತ ಶಿಕ್ಷಣ !: ವಾಣಿಜ್ಯಶಾಸ್ತ್ರದ ಅಧ್ಯಯನಕ್ಕೆ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಶಿಕ್ಷಣವು ಪರೀಕ್ಷೆಗಾಗಿ ಅಲ್ಲ, ಜ್ಞಾನದ ಗಳಿಕೆಗಾಗಿ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮುಂದಿನ ದಿನಗಳಲ್ಲಿ ಪರೀಕ್ಷಾರಹಿತ ಶಿಕ್ಷಣ ಬಂದರೂ ಅಚ್ಚರಿಯಿಲ್ಲ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ಡಿಜಿಟಲೀಕರಣವು ಎಲ್ಲ ರಂಗಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಅದರ ಗರಿಷ್ಠ ಪ್ರಯೋಜನವನ್ನು ವಿದ್ಯಾರ್ಥಿಗಳು, ಉಪನ್ಯಾಸಕರು ಪಡೆದುಕೊಳ್ಳಬೇಕು ಎಂದರು.
ಜ್ಞಾನ, ಕೌಶಲ ಮುಖ್ಯ: ಡಿಜಿಟಲ್ ಯುಗದಲ್ಲಿ ಜ್ಞಾನ, ಕೌಶಲ ಎರಡೂ ಸಮಾನ ಪ್ರಾಮುಖ್ಯತೆ ಹೊಂದಿವೆ. ಯಾವುದೇ ಹೊಸ ಯೋಜನೆಯ ಅನುಷ್ಠಾನಕ್ಕೆ ಜನರ ಮನೋಧರ್ಮವೇ ದೊಡ್ಡ ಸವಾಲು. ಡಿಜಿಟಲೀಕರಣದ ಸಂದರ್ಭದಲ್ಲಿ ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ. ಆಡಳಿತ ರಂಗದಲ್ಲಿ ಪಾರದರ್ಶಕತೆ ಸಾಧಿಸಲು ಡಿಜಟಲೀಕರಣದಿಂದ ಅನುಕೂಲವಾಗಲಿದೆ. ದತ್ತಾಂಶವು ಮಾಹಿತಿಯಾಗಿ, ಮಾಹಿತಿಯು ಜ್ಞಾನವಾಗಿ ಪರಿವರ್ತಿತವಾಗಿಸುವುದರಲ್ಲಿ ಅದರ ಪಾತ್ರ ಬಹಳ ಹಿರಿದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ತಿಳಿಸಿದರು.
ತುಮಕೂರು ವಿವಿ ಕುಲಪತಿ ವೈ.ಎಸ್. ಸಿದ್ದೇಗೌಡ, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ವಾಣಿಜ್ಯ ವಿಭಾಗದ ಡೀನ್ ಪ್ರೊ. ಜಿ.ಸುದರ್ಶನರೆಡ್ಡಿ, ಸಮ್ಮೇಳನದ ಅಧ್ಯಕ್ಷ ಪ್ರೊ. ಪಿ. ಪರಮಶಿವಯ್ಯ, ನಿರ್ದೇಶಕ ಪ್ರೊ.ಬಿ.ಶೇಖರ್, ಸಂಘಟನಾ ಕಾರ್ಯದರ್ಶಿ ಡಾ.ಎಸ್.ದೇವರಾಜಪ್ಪ ಉಪಸ್ಥಿತರಿದ್ದರು.