ತುಮಕೂರು: ಸತತ 26 ವರ್ಷಗಳಿಂದ ಸಂಸದೀಯ ಪಟು ಜೆ.ಸಿ.ಮಾಧುಸ್ವಾಮಿ ಹಾಗೂ ಸಿ.ಬಿ.ಸುರೇಶ್‌ಬಾಬು ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವು ಸಾಕ್ಷಿಯಾಗಿದೆ.
1997ರಲ್ಲಿ ಸುರೇಶ್‌ಬಾಬು ತಂದೆ ಎನ್.ಬಸವಯ್ಯ ಅಕಾಲಿಕ ನಿಧನದಿಂದ ಎದುರಾದ ಉಪಚುನಾವಣೆಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಿ ಜೆಸಿಎಂ-ಸಿಬಿಎಸ್ ಈವರೆಗೆ 6 ಚುನಾವಣೆಗಳಲ್ಲಿ ಮುಖಾಮುಖಿಯಾಗಿರುವುದು ವಿಶೇಷವೆನಿಸಿದೆ.
ಸಮಾಜವಾದಿ ಚಿಂತನೆಯ ಲೋಹಿಯಾವಾದಿ ಜೆ.ಸಿ.ಮಾಧುಸ್ವಾಮಿ 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಮೊದಲಬಾರಿ ವಿಧಾನಸಭೆ ಪ್ರವೇಶಿಸಿದವರು. ನಂತರ 1994ರಲ್ಲಿ ಬಂಗಾರಪ್ಪ ಅವರ ಕೆಸಿಪಿಯಿಂದ ಸ್ಪರ್ಧಿಸಿದ್ದ ಎನ್.ಬಸವಯ್ಯ ಮುಂದೆ ಜೆಸಿಎಂ ಮಂಡಿಯೂರಿದರು. ಕೆಸಿಪಿಯಿಂದ ಗೆದ್ದು ಶಾಸಕರಾಗಿದ್ದ ಎನ್.ಬಸವಯ್ಯ ಜನತಾದಳಕ್ಕೆ ಸೇರಿದರು. ಬಸವಯ್ಯ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ 1997ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಮಾಧುಸ್ವಾಮಿ ಬದಲಿಗೆ ಬಸವಯ್ಯ ಪುತ್ರ ಸಿ.ಬಿ.ಸುರೇಶ್‌ಬಾಬು (ಸಿಬಿಎಸ್)ಗೆ ಪಕ್ಷ ಮಣೆ ಹಾಕಿತು. ಹಾಗಾಗಿ, ಅನಿರೀಕ್ಷಿತವಾಗಿ ಸುರೇಶ್‌ಬಾಬು ರಾಜಕೀಯ ಪ್ರವೇಶವಾಯಿತು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಜೆಸಿಎಂ ಅವರನ್ನು ಜನ ಮತ್ತೊಮ್ಮೆ ಕೈಹಿಡಿದರು.
ಅಂದಿನಿಂದ ಕ್ಷೇತ್ರದಲ್ಲಿ ಜೆಸಿಎಂ-ಸಿಬಿಎಸ್ ನಡುವೆ ಏರ್ಪಟ್ಟ ರಾಜಕೀಯ ಪೈಪೋಟಿಗೆ ಈಗ ಬರೋಬ್ಬರಿ 26 ವರ್ಷ ಸಂದಿದೆ. ಜನತಾದಳ ಇಬ್ಭಾಗವಾದ ಬಳಿಕ ಜೆಸಿಎಂ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಅವರ ಸಂಯುಕ್ತ ಜನತಾದಳ ಸೇರಿದರೆ ದೇವೇಗೌಡರ ಸಾರಥ್ಯದ ಜಾತ್ಯತೀತ ಜನತಾದಳದ ತೆಕ್ಕೆಗೆ ಸುರೇಶ್‌ಬಾಬು ಜಾರಿದರು. ಆನಂತರದ 5 ಸಾರ್ವತ್ರಿಕ ಚುನಾವಣೆಯಲ್ಲೂ ಮಾಧುಸ್ವಾಮಿ-ಬಾಬಣ್ಣ ನಡುವೆಯೇ ರಾಜಕೀಯ ಜಿದ್ದಾಜಿದ್ದಿಗೆ ಕ್ಷೇತ್ರ ಅಖಾಡವಾಗಿದೆ.
ಕ್ಷೇತ್ರದ ಸಂಪರ್ಕ ಬಿಡಲಿಲ್ಲ ಸುರೇಶ್‌ಬಾಬು
ಬೈ ಎಲೆಕ್ಷನ್‌ನಲ್ಲಿ ಸೋತಿದ್ದ ಸುರೇಶ್‌ಬಾಬು ಕ್ಷೇತ್ರದ ಸಂಪರ್ಕ ಬಿಡಲಿಲ್ಲ. ಇನ್ನಷ್ಟು ಜನರ ಜತೆ ಒಡನಾಟ ಬೆಳೆಸಿಕೊಂಡರು. 2 ವರ್ಷಗಳ ಬಳಿಕ ಎದುರಾದ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಬಿ.ಸುರೇಶ್‌ಬಾಬುಗೆ ಜನತೆಯ ಆಶೀರ್ವಾದ ಸಿಕ್ಕಿತು. ಜೆಡಿಯುನಿಂದ ಸ್ಪರ್ಧಿಸಿದ್ದ ಜೆಸಿಎಂ ಸೋಲನುಭವಿಸಿದರು. ಒಮ್ಮೆ ಗೆಲ್ಲಿಸಿದವರನ್ನು ಮತ್ತೆ ಗೆಲ್ಲಿಸದೇ ಇರುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದ ಕ್ಷೇತ್ರದ ಮತದಾರರು 2004ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿಗೆ ಆಶೀರ್ವದಿಸಿದರು. ಅಸ್ತಿತ್ವ ಕಳೆದುಕೊಂಡ ಕಳ್ಳಂಬೆಳ್ಳ ಕ್ಷೇತ್ರದಿಂದ 2008ರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಶಾಸಕ ಕೆ.ಎಸ್.ಕಿರಣಕುಮಾರ್ ಸ್ಪರ್ಧಿಸಿದ ಪರಿಣಾಮ ಮಾಧುಸ್ವಾಮಿಗೆ ಸೋಲುಂಟಾಯಿತು. ಸದಾ ಕ್ಷೇತ್ರದಲ್ಲಿ ಜೆಸಿಎಂ-ಬಾಬು ನಡುವಿನ ಪೈಪೋಟಿ ಇತ್ತಾದರೂ ಆ ಬಾರಿ ಮಾಧುಸ್ವಾಮಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಸಿಬಿಎಸ್ ಗೆದ್ದು ಬೀಗಿದರು. 2013ರಲ್ಲಿ ಬಿಜೆಪಿ ಇಬ್ಭಾಗವಾಗಿ ಕೆಜೆಪಿ ಸೃಷ್ಟಿಯಾಯಿತು. ಜನತಾಪರಿವಾರದಲ್ಲಿದ್ದ ಮಾಧುಸ್ವಾಮಿ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರ್ಪಡೆಯಾಗಿ ಕಣಕ್ಕಿಳಿದರು. ಬಿಜೆಪಿ-ಕೆಜೆಪಿ ಒಡಕಿನ ಲಾಭ ಪಡೆದು ಸತತ ಎರಡನೇ ಬಾರಿ ಸುರೇಶ್ ಬಾಬು ಗೆದ್ದು ಕ್ಷೇತ್ರದ ಮಟ್ಟಿಗೆ ಇತಿಹಾಸ ಬರೆದರು.
ಪಾರುಪತ್ಯ ಸಾಧಿಸಿರುವವರು ಕುರುಬರು
ಲಿಂಗಾಯತ ಪ್ರಾಬಲ್ಯವುಳ್ಳ ಈ ಕ್ಷೇತ್ರದಲ್ಲಿ ಮೊದಲಿನಿಂದಲು ಪಾರುಪತ್ಯ ಸಾಧಿಸಿರುವವರು ಕುರುಬ ಸಮುದಾಯದವರು. ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಂತರದ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರು ಸಮಬಲರಿದ್ದಾರೆ. ಜೆಸಿಎಂ, ಕಿರಣ್‌ಕುಮಾರ್ ಲಿಂಗಾಯತ ಸಮುದಾಯಕ್ಕೆ ಸೇರಿದರೆ, ಸುರೇಶ್‌ಬಾಬು ಕುರುಬ ಸಮುದಾಯದವರು.
2018ರಲ್ಲಿ ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಜೆಸಿಎಂಗೆ ಕಮಲ ಚಿಹ್ನೆಯಡಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಎರಡು ಅವಧಿ ಬಳಿಕ ಮತ್ತೊಮ್ಮೆ ಮಾಧುಸ್ವಾಮಿ ಗೆಲುವಿನ ನಗೆಬೀರಿದರು. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್‌ನಿಂದ ಸುರೇಶ್‌ಬಾಬು, ಬಿಜೆಪಿಯಿಂದ ಮಾಧುಸ್ವಾಮಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ಬಿಜೆಪಿಯಲ್ಲಿದ್ದ ಕೆ.ಎಸ್.ಕಿರಣಕುಮಾರ್ ಈಗ ಕಾಂಗ್ರೆಸ್ ಅಭ್ಯರ್ಥಿ. ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜೆಸಿಎಂ ಮಾಡಿರುವರಾದರೂ ಕಿರಣ್ ಸ್ಪರ್ಧೆ ಅವರಿಗೆ ಕೊಂಚ ಹಿನ್ನಡೆ ತರುವ ಲೆಕ್ಕಾಚಾರಗಳಿವೆ. ಈ ಬಾರಿ ಮತದಾರರ ಕರುಣೆ ಯಾರ ಕಡೆ ಇದೆಯೋ ಕಾದುನೋಡಬೇಕಿದೆ.