ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಹಿನ್ನೆಲೆಯಲ್ಲಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಉಳಿಯತ್ತಡ್ಕದ ಮೂಲಸ್ಥಾನದಿಂದ ಆರಂಭಗೊಂಡು ಮಧೂರು ಕ್ಷೇತ್ರದವರೆಗೆ ನಡೆಯಿತು.
ಬೃಹತ್ ಶೋಭಾಯಾತ್ರೆಯೊಂದಿಗೆ ನಡೆದ ಹಸಿರುವಾಣಿ ಸಮರ್ಪಣಾ ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಂದ ಕುಣಿತ ಭಜನೆ, ಸಿಂಗಾರಿ ಮೇಳ, ಬ್ಯಾಂಡ್ ಮೇಳ, ಸಮವಸ್ತ್ರಧಾರಿ ಮಹಿಳೆಯರ ತಂಡ ಪಾಲ್ಗೊಳ್ಳುವ ಮೂಲಕ ರಂಗೇರಿತ್ತು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು. ವಿವಿಧ ಕೇಂದ್ರಗಳಿಂದ ಆಗಮಿಸಿದ ಹಸಿರುವಾಣಿ ಮೆರವಣಿಗೆ ಮೂಲಸ್ಥಾನದಿಂದ ಒಟ್ಟಾಗಿ ದೇವಸ್ಥಾನಕ್ಕೆ ತಲುಪಿತು.