ಜಿಲ್ಲೆ

ಮಧುಕರ್ ಅಕ್ರಮ ಬಯಲಿಗೆ: ಟ್ಯೂಷನ್ ಫೀ ಹೆಸರಿನಲ್ಲಿ ಅವ್ಯವಹಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಬೆಂಗಳೂರು ಖಾಸಗಿ ವಿಶ್ವವಿದ್ಯಾಲಯದಿಂದ ವಜಾಗೊಂಡಿರುವ ಮಾಜಿ ಕುಲಪತಿ ಮಧುಕರ್ ಅಂಗೂರ್ ವಿಶ್ವವಿದ್ಯಾಲಯದ ನೂರಾರು ಕೋಟಿ ರೂ.ಗಳನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿರುವ ಸ್ಪೋಟಕ ಸಂಗತಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಬಹಿರಂಗಗೊಂಡಿದೆ.

ಅಮೆರಿಕದ ಪ್ರಜೆಯಾಗಿ ಗುರುತಿಸಿಕೊಂಡಿರುವ ಮಧುಕರ್ ಅಂಗೂರ್ ಅಕ್ರಮದ ಜಾಡು ಹಿಡಿದು ಹೊರಟಿರುವ ಇಡಿ, ಅಮೆರಿಕದಲ್ಲಿ ಇವರು ಹೊಂದಿರುವ ಖಾತೆಗೆ ಅಕ್ರಮವಾಗಿ 128 ಕೋಟಿ ರೂ. ವರ್ಗಾವಣೆ ಮಾಡಿರುವುದನ್ನು ಪತ್ತೆಹಚ್ಚಿದೆ. ಅಲ್ಲದೆ, ಈ ಹಣವನ್ನು ಬಿಳಿಯಾಗಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಇಡಿ ಬಂಧನ ಭೀತಿ: ಮಧುಕರ್ ಅಂಗೂರ್ 4ನೇ ಪತ್ನಿ ಪ್ರಿಯಾಂಕ ಅಂಗೂರ್ (28) ಹಾಗೂ ರವಿಕುಮಾರ್ (35) ಜತೆಯಾಗಿ ಅಮೆರಿಕದ ಷಿಕಾಗೋದಲ್ಲಿ ಐಷಾರಾಮಿ ಫ್ಲಾಟ್ ಮೂಲಕ ವೈಯಕ್ತಿಕ ಹಣವನ್ನು ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. 80 ಎಕರೆ ಕೃಷಿ ಭೂಮಿ ಹಾಗೂ ಕೋಟ್ಯಂತರ ರೂ. ಹೊಂದಿರುವುದೂ ಕಂಡುಬಂದಿದೆ. ಈ ದಂಧೆಯ ಜಾಲದ ಜಾಡು ಹಿಡಿದು ಹೊರಟಿರುವ ಇಡಿ ಹಲವು ರಹಸ್ಯಗಳನ್ನು ಪತ್ತೆ ಹಚ್ಚಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಲ್ಲಿ (ಫೆಮಾ)ಅಡಿಯಲ್ಲಿ ಮಧುಕರ್ ವಿರುದ್ಧ ಇಸಿಐಆರ್ ದಾಖಲಿಸಿರುವ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ಕಳೆದ ಅ.9ರಂದು ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅ.19 ರಂದು ಮತ್ತೆ ಕರೆಸಿಕೊಂಡು ವಿಚಾರಣೆ ನಡೆಸಿದ ಇಡಿ ಅಕ್ರಮಗಳ ಹಣ ವರ್ಗಾವಣೆ ಬಗ್ಗೆ ಮಾಹಿತಿ ಕಲೆ ಹಾಕಿದೆ. ಇದೀಗ ಮಧುಕರ್ ಅಂಗೂರ್​ಗೆ ಬಂಧನದ ಭೀತಿ ಎದುರಾಗಿದೆ.

128 ಕೋಟಿ ರೂ. ಅಕ್ರಮ ವರ್ಗಾವಣೆ

2011-14ರ ಅವಧಿಯಲ್ಲಿ ವಿಶ್ವ ವಿದ್ಯಾಲಯಕ್ಕೆ ಸೇರಿದ ಭಾರಿ ಮೊತ್ತದ ಅನುದಾನವನ್ನು ತಮ್ಮ ವೈಯಕ್ತಿಕ ಖಾತೆಗೆ ಮಧುಕರ್ ವರ್ಗಾವಣೆ ಮಾಡಿದ್ದರು. ಈ ಮೊತ್ತದಲ್ಲಿ ಭಾರತದ ಸ್ಥಳೀಯ ಹಣ ವಿನಿಮಯ ಕೇಂದ್ರದ ಮೂಲಕ ಯುಎಸ್ ಡಾಲರ್​ಗಳನ್ನು ಖರೀದಿಸಿದ್ದರು. ನಂತರ ಇವರ ಭಾರತೀಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಅಮೆರಿಕ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ಭಾರತದಲ್ಲಿದ್ದ ಕಪು್ಪ ಹಣವನ್ನು ಅಮೆರಿಕನ್ ಡಾಲರ್​ಗೆ ವರ್ಗಾಯಿಸಿ ಬಿಳಿ ಹಣವನ್ನಾಗಿ ಪರಿವರ್ತಿಸಲೆಂದೇ ಶೆಲ್ ಕಂಪನಿ ಸ್ಥಾಪಿಸಿದ್ದರು. ನಕಲಿ ಇನ್​ವಾಯ್್ಸಳನ್ನು ಹೆಚ್ಚಿಸಿ ಈ ಕಂಪನಿ ಮೂಲಕ ಕಾನೂನುಬಾಹಿರವಾಗಿ ನಕಲಿ ಕಾರ್ಯಾದೇಶಗಳನ್ನು ತಯಾರಿಸಿದ್ದರು. ನಂತರ ಈ ಕಂಪನಿ ಮೂಲಕ ಭಾರತದಲ್ಲಿದ್ದ ಕಪು್ಪ ಹಣವನ್ನು ಡಾಲರ್​ಗೆ ಪರಿವರ್ತಿಸಿದ್ದಾರೆ. ಇವರು ಸ್ಥಳೀಯವಾಗಿ ಹೊಂದಿದ್ದ ಖಾತೆಯಿಂದ ಅಕ್ರಮವಾಗಿ ಒಟ್ಟು 128 ಕೋಟಿ ರೂ.ಗಳನ್ನು ಅಮೆರಿಕದಲ್ಲಿರುವ ಖಾತೆಗೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ.

107 ಕೋಟಿ ರೂ. ವಸೂಲಿ

2015 ರಿಂದ 17ರ ವರೆಗೆ ತಾನೇ ಅಲಯೆನ್ಸ್ ವಿವಿಯ ಚಾನ್ಸಲರ್ ಎಂದು ಹೇಳಿ ವಿದ್ಯಾರ್ಥಿಗಳಿಂದ ಟ್ಯೂಷನ್ ಶುಲ್ಕ ಹೆಸರಿನಲ್ಲಿ 107 ಕೋಟಿ ರೂ.ಗಳನ್ನು ಅಕ್ರಮವಾಗಿ ವಸೂಲು ಮಾಡಿದ್ದರು. ನಂತರ ಈ ಹಣವನ್ನು ವಿವಿಯ ಖಾತೆಗೆ ಜಮಾ ಮಾಡದೆ ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಈ ಹಗರಣದಲ್ಲಿ ಹಲವು ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿರುವುದು ಇಡಿ ಗಮನಕ್ಕೆ ಬಂದಿದೆ. ವಿವಿಗಳ ಬೋಧನಾ ಶುಲ್ಕ ದುರುಪಯೋಗ ಪಡಿಸಿರುವ ಬಗ್ಗೆ 2017ರಲ್ಲಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಜತೆಗೆ 2016ರಲ್ಲಿ ಮಡಿವಾಳ ಠಾಣೆಯಲ್ಲಿ ಮಧುಕರ್ ಅಂಗೂರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಏಕವ್ಯಕ್ತಿ ಆಯೋಗದಿಂದ ವರದಿ

ಅಲಯೆನ್ಸ್ ವಿಶ್ವವಿದ್ಯಾಲಯದಲ್ಲಿ ಅಂಗೂರ್ ಕುಲಪತಿಯಾಗಿದ್ದ ಸಂದರ್ಭದಲ್ಲಿ ನಡೆಸಿದ ಅಕ್ರಮಗಳು ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಅಂಗೂರ್ ಹಣ ದುರ್ಬಳಕೆ ಮಾಡಿರುವ ಬಗ್ಗೆ ತನಿಖೆ ನಡೆಸಲು ಮಂಗಳೂರು ವಿವಿಯ ಅಮೆರಿಟಸ್ ಚಾನ್ಸಲರ್ ಡಾ.ಎಂ.ಐ.ಸವದತ್ತಿ ಅವರನ್ನು ಒಳಗೊಂಡ ಏಕವ್ಯಕ್ತಿ ಆಯೋಗ ವನ್ನು ರಚಿಸಲಾಗಿದೆ. ಆಯೋಗವು ಈಗಾಗಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಬೋಧನಾ ಶುಲ್ಕ ಸೇರಿ 96 ಕೋಟಿ ರೂ. ಗಳನ್ನು ಅಕ್ರಮವಾಗಿ ವೈಯಕ್ತಿಕ ಖಾತೆಗೆ ವರ್ಗಾಯಿಸಿರುವುದನ್ನು ಉಲ್ಲೇಖಿಸಲಾಗಿದೆ.