ಜಿಲ್ಲೆ

ಸಿಎಂ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಕಟ್ಟುತ್ತಿದ್ದವರಿಗೆ ಎಲೆಕ್ಟ್ರಿಕ್ ಶಾಕ್ಒರ್ವನ ಸ್ಥಿತಿ ಗಂಭೀರ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸಿಎಂ ಕಾರ್ಯಕ್ರಮದ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಅವಘಡದಲ್ಲಿ ಒರ್ವ ಗಂಭೀರವಾಗಿ ಗಾಯಗೊಂಡು ಮತ್ತೊಬ್ಬ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಮಧುಗಿರಿ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಶೆಟ್ಟಿಹಳ್ಳಿ ಮೂಲದ ಶಂಕರಪ್ಪ (60) ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆ ನಿವಾಸಿ ಹಿಮಾಚಲ (42)ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೆ. 6 ರಂದು ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸ್ವಾಗತ ಕೋರಿ ಮಧುಗಿರಿ ಪಟ್ಟಣದಲ್ಲಿ ಫ್ಲೆಕ್ಸ್ ಕಟ್ಟಲಾಗುತ್ತಿತ್ತು. ಈ ವೇಳೆ ಫ್ಲೆಕ್ಸ್ ಕಟ್ಟುತ್ತಿದ್ದ ಶಂಕರಪ್ಪ ಹಾಗೂ ಹಿಮಾಚಲಗೆ ವಿದ್ಯುತ್ ತಗುಲಿದ್ದು ಈ ಅವಘಡ ಸಂಭವಿಸಿದೆ. ಶಂಕರಪ್ಪನ ಸ್ಥಿತಿ ಗಂಭೀರವಾಗಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹಿಮಾಚಲಗೆ ಸಣ್ಣಪುಟ್ಟಗಾಯಗಳಾಗಿದ್ದು ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗ್ಗೆ ಕಾರ್ಯಕ್ರಮದ ಸಿದ್ದತೆಯನ್ನು ಗೃಹ ಸಚಿವ ಡಾ.ಜಿ .ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ಹಂಚಿಕೊಂಡಿದ್ದರು. ಸಚಿವರು ತೆರಳಿದ ಬಳಿಕ ಈ ಘಟನೆ ನಡೆದಿದೆ.

ಗಾಯಾಳುಗಳ ಭೇಟಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು ಅವರು ಸುದ್ದಿ ತಿಳಿಯುತ್ತಿದ್ದಂತೆ ಮಧುಗಿರಿ ಆಸ್ಪತ್ರೆಗೆ ತೆರಳಿ ಗಾಯಾಳು ಹಿಮಾಚಲ ಭೇಟಿ ನೀಡಿ ಮಾಹಿತಿ ಪಡೆದು ಧೈರ್ಯ ತುಂಬಿದರು. ಗಂಭೀರವಾಗಿ ಗಾಯಗೊಂಡಿರುವ ಶಂಕರಪ್ಪ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.