ಜಿಲ್ಲೆ

ಹೆರಿಗೆಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ; ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಶಾಸಕ ವೀರಭದ್ರಯ್ಯ ಅಸಮಾಧಾನ

ಮಧುಗಿರಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳ.. ಸಸಿ ನೆಟ್ಟಿರುವುದಕ್ಕೆ ದಾಖಲೆ ಇಲ್ಲದಿರುವುದು... ಕೆಲ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವುದು... ಸೇರಿ ಸೇರಿ ಹಲವು ವಿಷಯಗಳು ತಾಪಂ ಸಭಾಂಗಣದಲ್ಲಿ ಬುಧವಾರ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಎಂ.ವಿ. ವೀರಭದ್ರಯ್ಯ ಅಧ್ಯಕ್ಷತೆಯಲ್ಲಿ ಚರ್ಚೆಯಾದವು.

ಅಶಕ್ತರು, ಬಡ ಹೆಣ್ಣು ಮಕ್ಕಳು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಭಿಸಿದ್ದು, ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು ಸರ್ಕಾರಿ ಅಸ್ಪತ್ರೆಗಳಲ್ಲಿ ಹೆರಿಗೆ ಮಾಡದೇ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸುತ್ತಿರುವ ಆರೋಪಗಳು ಕೇಳಿ ಬರುತ್ತಿರುವುದು ತಲೆ ತಗ್ಗಿಸಬೇಕಾದ ಸಂಗತಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಕಳೆದ ವರ್ಷ 20,317 ಗರ್ಭಿಣಿಯರು ದಾಖಲಾಗಿದ್ದು, ಕೇವಲ 880 ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದೀರಾ ಎಂದು ಆಸ್ಪತ್ರೆ ಅಧಿಕಾರಿ ಕೇಶವರೆಡ್ಡಿ ಅವರನ್ನು ಜಿಪಂ ಸದಸ್ಯ ಚೌಡಪ್ಪ, ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಪ್ರಶ್ನಿಸಿದರು.

ಗರ್ಭಿಣಿಯರ ಸಾಮಾನ್ಯ ಹೆರಿಗೆಗೂ ಸಿಜೇರಿಯನ್ ಎಂಬುದಾಗಿ ಹೆದರಿಸಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸುತ್ತಿರುವುದಾಗಿ ಆರೋಪಗಳಿದ್ದು, ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರೇ ಸರ್ಕಾರಿ ಅಧಿಕಾರಿಗಳನ್ನು ನಿಯಂತ್ರಿಸುವ ಹಂತಕ್ಕೆ ಬೆಳೆದಿದ್ದಾರೆ ಎಂದು ಜಿಪಂ ಸದಸ್ಯ ತಿಮ್ಮಯ್ಯ ಸಭೆಯ ಗಮನಕ್ಕೆ ತಂದರು.

ಕೆಲ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಶಿಸ್ತು ಕ್ರಮಗಳ ಹಣೆ ಬರಹ ನನಗೆ ಗೊತ್ತಿದೆ, ಹಾರಿಕೆಯ ಉತ್ತರ ನೀಡದೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದರು.

ನಿಮ್ಮ ನೋಟಿಸ್ ಪಕೋಡಾ ಕಟ್ಟಲು ಬಳಸುತ್ತಾರೆ :ಸರ್ಕಾರ ರೈತರಿಗೆ ಅನೇಕ ಸವಲತ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಅದನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಇಲಾಖೆ ಅಧಿಕಾರಿಗಳದ್ದು, ಆದರೆ, ನಿಮ್ಮನ್ನು ನಿಮ್ಮ ಇಲಾಖೆಯ ಕೆಳ ಹಂತದ ನೌಕರರೇ ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪಗಳಿವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಅವರನ್ನು ಶಾಸಕರು ಪ್ರಶ್ನಿಸಿದಾಗ ಅಂಥವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು. ನಿಮ್ಮ ನೋಟಿಸನ್ನು ಅವರು ಪಕೋಡ ಕಟ್ಟಲು ಬಳಸಿರುತ್ತಾರೆ ಬಿಡಿ ಎಂದು ಶಾಸಕರು ಸಿಡಿಮಿಡಿಗೊಂಡರು.

10 ಗಿಡ ತೋರಿಸಿ ಸಾಕು : ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕಳೆದ ವರ್ಷ 14 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದನ್ನು ತಾಲೂಕಿನಾದ್ಯಂತ ಸಸಿ ನೆಡಲು ಬಳಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ತಾರಕೇಶ್ವರಿ ಸಭೆಗೆ ಮಾಹಿತಿ ನೀಡಿದಾಗ, ಸಸಿ ನೆಟ್ಟಿದ್ದಕ್ಕೆ ದಾಖಲೆ ಏನಿದೆ ತೋರಿಸಿ, 14 ಲಕ್ಷ ಬಂದಿದೆ ಎನ್ನತ್ತೀರಾ ಕನಿಷ್ಠ 10 ಗಿಡ ಉಳಿಸಿಕೊಂಡಿದ್ದೀರಾ...? ಸಸಿ ನೆಡುವ ಕಾರ್ಯಕ್ರಮಕ್ಕೆ ನನಗೆ ಅಥವಾ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೀರಾ ಎಂದು ಶಾಸಕರು ಪ್ರಶ್ನಿಸಿದಾಗ ಇವರ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳೂ ಜನಪ್ರತಿನಿಧಿಗಳಿಗೆ ಸ್ಪಂದಿಸುವುದಿಲ್ಲ ಎಂದು ಜಿಪಂ ಸದಸ್ಯ ತಿಮ್ಮಯ್ಯ ಧ್ವನಿಗೂಡಿಸಿದರು.

ಪಿಡಿಒಗಳು ತಹಸೀಲ್ದಾರ್‌ಗಿಂತಲೂ ದೊಡ್ಡವರಂತೆ ವರ್ತಿಸುತ್ತಿದ್ದು, ಯಾರ ಮಾತನ್ನೂ ಕೇಳದಂತಾಗಿದ್ದಾರೆ. ನನಗೂ ಸಾಕಾಗಿ ಹೋಗಿದೆ. ಪಿಡಿಒಗಳ್ಯಾರೂ ಸತ್ಯ ಹರಿಶ್ಚಂದ್ರರಲ್ಲ. ಅವರು ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಸರಿ ಹೋಗದಿದ್ದಲ್ಲಿ ಚಾಟಿ ಬೀಸಬೇಕಾಗುತ್ತದೆ. ಎಂ.ವಿ.ವೀರಭದ್ರಯ್ಯ, ಶಾಸಕ.