ಜಿಲ್ಲೆ

ಅಂಗವೈಕಲ್ಯ ಮೆಟ್ಟಿನಿಂತು ಸಾಧನೆ ಮಾಡಿದ ಶಾಂತಕುಮಾರ ; ಮಕ್ಕಳ ಪ್ರೀತಿಯ ಶಿಕ್ಷಕ, ಪವಾಡ ಭಂಜಕ, ಸಾಹಿತಿ ; ಎಲೆಮರೆ ಕಾಯಿಯಂತೆ ಹಲವು ಕ್ಷೇತ್ರದಲ್ಲಿ ಸಾಧನೆ

Tumakuru

ಮಧುಗಿರಿ : ಬಾಲ್ಯೃದಲ್ಲಿಯೇ ಪೋಲಿಯೋಗೆ ತುತ್ತಾಗಿದ್ದರೂ ಕಠಿಣ ಪರಿಶ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆಕಾಯಿಯಂತೆ ಸಾಧನೆ ಮಾಡುತ್ತಿದ್ದಾರೆ ಗ್ರಾಮೀಣ ಪ್ರತಿಭೆ ಶಿಕ್ಷಕ ಸಿ.ಇ.ಶಾಂತಕುಮಾರ್. ಶ್ರದ್ಧೆ ಹಾಗೂ ಪರಿಶ್ರಮದಿಂದ ಮೂಲಕ ಮಕ್ಕಳ ಪ್ರೀತಿಯ ಶಿಕ್ಷಕ, ಪವಾಡ ಭಂಜಕ, ಸಾಹಿತಿಯೂ ಹೌದು..

ಐ.ಡಿ.ಹಳ್ಳಿ ಹೋಬಳಿಯ ಚಿಕ್ಕದಾಳವಟ್ಟದ ಗಂಗಮ್ಮ, ಈರಲಕ್ಕಪ್ಪ ದಂಪತಿಯ 4ನೇ ಪುತ್ರನಾಗಿ ಜನಿಸಿದ ಶಾಂತಕುಮಾರ್ ರಂಗಭೂಮಿ, ಪೌರಾಣಿಕ ನಾಟಕಗಳತ್ತ ಒಲವು ಬೆಳೆಸಿಕೊಂಡವರು. 2002ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡು, ದೂರ ಶಿಕ್ಷಣದ ಮೂಲಕ ಬಿಎ ಹಾಗೂ ಬಿ.ಇಡಿ ಮುಗಿಸಿ ಪ್ರಸ್ತುತ ದೊಡ್ಡದಾಳವಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಶಾಂತಕುಮಾರ್ ವೃತ್ತಿಯಲ್ಲಿ ಶಿಕ್ಷಕನಾದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ, ಸಾಹಿತಿ, ಜಾದೂಗಾರ.

ಶಿಕ್ಷಕ ವೃತ್ತಿಯ ಜತೆ ಗ್ರಾಮೀಣ ಭಾಗದಲ್ಲಿ ಮದ್ಯಪಾನ, ಅನಕ್ಷರತೆ, ಬಾಲ್ಯೃವಿವಾಹದ ದುಷ್ಪರಿಣಾಮಗಳು ಹಾಗೂ ಜಿಲ್ಲೆಯ ಹಲವು ಶಾಲೆಗಳಲ್ಲಿ ಮೂಢನಂಬಿಕೆ, ಮಾನಸಿಕ ತೊಂದರೆ, ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿದ್ದಾರೆ. ಗಡಿನಾಡಲ್ಲಿ ತೆಲುಗು ಭಾಷೆಯ ಅಬ್ಬರದ ನಡುವೆ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಾ 200ಕ್ಕೂ ಹೆಚ್ಚು ಕವಿತೆ ರಚಿಸಿದ್ದಾರೆ.

ಬಹುಮುಖ ಪ್ರತಿಭೆಗೆ ಪ್ರಶಸ್ತಿಗಳ ಗರಿ: ಬರವಣಿಗೆ ಬಾರದವನು, ಕುಡುಕ ಕಟ್ಟಿದ ತಾಳಿ ಎಂಬ ಪೌರಾಣಿಕ ನಾಟಕಗಳಲ್ಲೂ ಶಾಂತಕುಮಾರ್ ಅಭಿನಯಿಸಿದ್ದು, 2006ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಹನಿಹನಿ ಇಬ್ಬನಿ ಕಾವ್ಯ ಬಳಗದ ಸದಸ್ಯರಾಗಿರುವ ಇವರು ‘ನನ್ನವ್ವ’ ಕವನ ಸಂಕಲನ ಹೊರತಂದಿದ್ದು, ಇತ್ತೀಚೆಗೆ ಒಲವ ಕಂದೀಲು ಕವನ ಸಂಕಲನ ಕೂಡಾ ಬಿಡುಗಡೆಗೊಂಡಿದೆ. ಬಣ್ಣದ ಚಿಟ್ಟೆ ಮಕ್ಕಳ ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಂಡಿದೆ. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಾಮಾಜಿಕ ಕಾಳಜಿಗೆ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಸರ್ವಶಿಕ್ಷಣ ಅಭಿಯಾನದಡಿ 2008-09ನೇ ಸಾಲಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, ಹಳೆಯ ವಿದ್ಯಾರ್ಥಿಗಳಿಂದ ಪ್ರೇರಣಾ ಶಿಕ್ಷಕ ರತ್ನ ಪ್ರಶಸ್ತಿ, ಜ್ಞಾನ ಜ್ಯೋತಿ ಶಿಕ್ಷಕ ಪ್ರಶಸ್ತಿ, 2019ರಲ್ಲಿ ಮಧುಗಿರಿ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, 2020ರಲ್ಲಿ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸಾಧನೆಗೆ ಅಂಗವಿಕಲತೆ ಅಡ್ಡಿಯಾಗುತ್ತದೆ ಅಂದುಕೊಂಡರೆ ಸಾಧನೆ ಮಾಡಲಾವುದಿಲ್ಲ, ಬುದ್ದಿವಂತಿಕೆ ಹಾಗೂ ಆತ್ಮಬಲ ಮುಖ್ಯ, ಜೇಬಿನಲ್ಲಿ ದುಡ್ಡ್ಲಿದಿದ್ದರೂ, ಕನಸುಗಳಿದ್ದರೆ ಏನು ಬೇಕಾದರೂ ಸಾಧಿಸಬಹುದು. ಸಿ.ಇ. ಶಾಂತಕುಮಾರ್, ದೊಡ್ಡದಾಳವಟ್ಟ ಸರ್ಕಾರಿ ಶಾಲೆ ಶಿಕ್ಷಕ ಬಹುಮುಖ ಪ್ರತಿಭೆ ಶಿಕ್ಷಕ ಸಿ.ಇ ಶಾಂತಕುಮಾರ್ ಪ್ರಯೋಗಗಳಿಂದ ಮಾದರಿಯಾಗಿದ್ದಾರೆ. ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದು, ಇವರ ಕವನ ಸಂಕಲನಗಳು ಮನಮುಟ್ಟುವಂತಿವೆ. ಕೃಷ್ಣಮೂರ್ತಿ ಮಧುಗಿರಿ ಡಿಡಿಪಿಐ