ಜಿಲ್ಲೆ

ಮಧುಗಿರಿ ಮೋದಿಗೆ ಶಿಕ್ಷೆ ವಿಧಿಸಿ

Hassan

ಹಾಸನ: ಸಾಮಾಜಿಕ ಜಾಲತಾಣಗಳಲ್ಲಿ ಮಧುಗಿರಿ ಮೋದಿ ಎಂಬಾತ ಪ್ರವಾದಿ ಮಹಮ್ಮದರ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆಂದು ಆರೋಪಿಸಿ ಮುಸ್ಲಿಂ ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅತುಲ್ ಕುಮಾರ್ ಎಂಬಾತ ಮಧುಗಿರಿ ಮೋದಿ ಎಂಬ ಹೆಸರಿನ ಫೇಸ್‌ಬುಕ್ ಅಕೌಂಟ್ ಹೊಂದಿದ್ದು, ಕೋಮು ಸಾಮರಸ್ಯ ಹಾಳು ಮಾಡುವ ಸಂದೇಶಗಳನ್ನು ಬಿತ್ತರಿಸುತ್ತಿದ್ದಾನೆ. ಮಹಮ್ಮದ್ ಪೈಗಂಬರ್ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ. ಮುಸ್ಲಿಂ ಮಹಿಳೆಯೊಬ್ಬರಿಗೆ ಕರೆ ಮಾಡಿ ಮತಾಂತರವಾಗುವಂತೆ ಹಾಗೂ ತನ್ನ ಪುತ್ರನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 40 ದಿನದ ಮಗುವನ್ನು ಮಂಗಳೂರಿನ ಆಂಬುಲೆನ್ಸ್ ಚಾಲಕ ಹನೀಫ್ 4.20 ಗಂಟೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದದ್ದಕ್ಕೆ ರಾಜ್ಯವೇ ಸಂತಸ ವ್ಯಕ್ತಪಡಿಸಿದ್ದು, ಮಧುಗಿರಿ ಮೋದಿ ಅದಕ್ಕೆ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾನೆ ಎಂದರು.

ಸಮಾಜದ ಶಾಂತಿ ಕದಡಿಸಲು ಯತ್ನಿಸುವ ಇಂತವರಿಗೆ ಶಿಕ್ಷೆಯಾಗಬೇಕು. ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಳ್ಳುವದಷ್ಟೇ ಅಲ್ಲದೆ ಸಮಾಜದ ಸ್ವಾಸ್ಥೃ ಹಾಳು ಮಾಡುವ ಅನೇಕರು ರಾಜ್ಯದಲ್ಲಿದ್ದು, ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ಮುಖಂಡರಾದ ಅಮೀರ್ ಅಹಮದ್, ಹಾರೂನ್, ಅಕ್ಬರ್, ನವಾಜ್, ಸಾದಿಕ್, ಪರ್ವೀಜ್ ಪಾಷಾ ಇತರರಿದ್ದರು.