ಬೆಳಗಾವಿ: ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಪೈಕಿ 2,120 ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದ್ದು, ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ, 15 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಿಲ್ಲ. ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು. ಸರ್ಕಾರಿ ಪಪೂ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ. ಸರ್ಕಾರ ಕೂಡಲೇ ಈ ಉಪನ್ಯಾಸಕರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಣ ಇಲಾಖೆಯ ಹುದ್ದೆಗಳನ್ನು ಹಣಕಾಸಿನ ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ನೇಮಕ ಮಾಡುತ್ತೇವೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. ಪರಿಷತ್ನಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಭಾಗದಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಿಕ್ಷಣದಿಂದ ಪದವಿ ಕಾಲೇಜುಗಳವರೆಗೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಮಾತೃಭಾಷಾ ಶಿಕ್ಷಣ ಕಾಯ್ದೆ ಕೇಂದ್ರ ಸರ್ಕಾರ ತಿರಸ್ಕಾರ
1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಕಿತಕ್ಕೆ ಕಳುಹಿಸಿದ್ದ ಮಸೂದೆಯನ್ನು ಕೇಂದ್ರ ಸರ್ಕಾರ ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ತಿರಸ್ಕರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ಗೆ ತಿಳಿಸಿದರು. ಪ್ರಶ್ನೋತ್ತರ ವೇಳೆ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, 2015ರಲ್ಲಿ ರಾಜ್ಯ ಸರ್ಕಾರ ಎರಡೂ ಸದನಗಳಲ್ಲಿ ಬಹುಮತದಿಂದ ಅಂಗೀಕರಿಸಿತ್ತು. ಸವೋಚ್ಚ ನ್ಯಾಯಾಲಯದ ತೀರ್ಪು ಆಧರಿಸಿ ಈ ವಿಧೇಯಕವನ್ನು ಕೇಂದ್ರ ಶಿಕ್ಷಣ ಇಲಾಖೆ ತಿರಸ್ಕರಿಸಿದೆ ಎಂದರು. ನಮ್ಮ ಮಕ್ಕಳಿಗೆ ನಾವೇ ಕನ್ನಡ ಕಲಿಸಲು ಆದ್ಯತೆ ನೀಡದಿದ್ದರೆ ಹೇಗೆ? ರಾಜ್ಯ ಸರ್ಕಾರ ಪರ್ಯಾಯ ಮಾರ್ಗ ಹುಡುಕಲಿ ಎಂದು ಯು.ಬಿ. ವೆಂಕಟೇಶ್ ಸಲಹೆ ನೀಡಿದರು.
ಪೋಡಿಮುಕ್ತ ಗ್ರಾಮಕ್ಕೆ ಮತ್ತೆ ಚಾಲನೆ
ಬೆಳಗಾವಿ: ಪೋಡಿ ಸಮಸ್ಯೆ ಪರಿಹರಿಸಲು ಮತ್ತೆ ಪೋಡಿಮುಕ್ತ ಗ್ರಾಮ ಅಭಿಯಾನ ಆರಂಭಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಅಶ್ವತ್ಥ ನಾರಾಯಣ ಪ್ರಶ್ನೆಗೆ ಉತ್ತರಿಸಿದರು. ರಾಜ್ಯಾದ್ಯಂತ ಶೇ.70 ಸಮಸ್ಯೆಗಳನ್ನು ಬಗೆಹರಿಸಬಹುದಾಗಿದ್ದು, ಪ್ರತಿ ಹಳ್ಳಿಗೂ ಹೋಗಿ ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ನಡೆಸಲಿದ್ದೇವೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಂಕಲ್ಪ ಮಾಡಿದ್ದೇವೆ ಎಂದರು.ಪೋಡಿ ಬಾಕಿ ಪ್ರಕರಣಗಳಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇತ್ತೀಚೆಗೆ ಸಿಎಂ ಜನತಾದರ್ಶನದಲ್ಲೂ ಪೋಡಿ ಸಮಸ್ಯೆಗಳ ಸಂಖ್ಯೆಯೇ ಹೆಚ್ಚಾಗಿ ಬಂದಿದೆ ಎಂದರು. ಪೋಡಿಮುಕ್ತ ಗ್ರಾಮ ಯೋಜನೆ ಆರಂಭವಾದ 2015ರಲ್ಲಿ 16,930 ಹಳ್ಳಿಗಳನ್ನು ಪೋಡಿಮುಕ್ತ ಮಾಡುವ ಗುರಿ ಹೊಂದಲಾಗಿತ್ತು. ಈ ಅಭಿಯಾನ ಕುಂಟುತ್ತ ಸಾಗಿದ ಪರಿಣಾಮ ಇನ್ನೂ 16,085 ಗ್ರಾಮಗಳು ಬಾಕಿ ಇವೆ.ಕಳೆದ ಮೂರು ವರ್ಷದಿಂದ ಪೋಡಿಮುಕ್ತ ಗ್ರಾಮ ಯೋಜನೆಯ ಸಾಧನೆ ಸಮಾಧಾನಕರವಾಗಿಲ್ಲ. ಹೀಗಾಗಿ ಸಾಧ್ಯವಾದಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡಲು ಕಂದಾಯ ಇಲಾಖೆ ಬದ್ಧವಾಗಿದೆ ಎಂದರು.