ಹುಬ್ಬಳ್ಳಿ: ನನ್ನ ಮೇಲೆ ಬಂದಿರುವುದು ಚೆಕ್ ಬೌನ್ಸ್ ಪ್ರಕರಣವಲ್ಲ. ನಾವೇ ಕೋರ್ಟ್‌ನಲ್ಲಿ ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ಇದರಲ್ಲಿ ನನ್ನನ್ನೂ ಎಳೆದು ತರಬೇಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ನಾವೇ ಒಪ್ಪಿಕೊಂಡು ಮಾಡಿಕೊಂಡಿದ್ದೇವೆ. ಡಿ. 26ರಂದು ಬಂದಿದೆ. ಇದು 12 ವರ್ಷದ ವ್ಯಾಜ್ಯ. ಇದನ್ನು ನಾನೇ ಬರವಣಿಗೆಯಲ್ಲಿ ಬರೆದು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಟ್ಟಿದ್ದೇನೆ. ಅಲ್ಲದೇ ಇದು ನನ್ನ ವೈಯಕ್ತಿಕ ಇಲ್ಲ. ಕಂಪನಿ ಮೇಲೆ ಇದೆ. ಹೀಗಾಗಿ ಮಾಧ್ಯಮ ಜವಾಬ್ದಾರಿಯುತವಾಗಿ ಮಾಹಿತಿ ನೀಡಬೇಕು ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಇವತ್ತು ಏಕೆ ಈ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದಕ್ಕೆ ಉತ್ತರ ಹುಡುಕಲಿ ಎಂದು ಕುಟುಕಿದರು.
ಎಂಎಲ್‌ಸಿ ಬಿ.ಕೆ. ಹರಿಪ್ರಸಾದ ಅವರ ಈಡಿಗ ಸಮಾವೇಶದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ತಲೆ ಕೆಟ್ಟಿರುವ ಸ್ವಾಮೀಜಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಯತ್ನಾಳ ಅವರ ಆರೋಪವನ್ನು ತನಿಖೆ ಮಾಡಿ ಹೊರಗೆ ತರುವುದು ಒಳ್ಳೆಯದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಪ್ರಕರಣಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕಟ್ಟುನಿಟ್ಟಿನ ಆದೇಶ ಮಾಡಲಾಗುವುದು. ಎಫ್‌ಐಆರ್ ಕೂಡ ಹಾಕಲಾಗುವುದು. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲಾಗುವುದು. 43 ಸಾವಿರ ಶಿಕ್ಷಕರ ಕೊರತೆ ಇದೆ. ನೇಮಕಾತಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದರು.