ಮಧುಗಿರಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಚಿಕಿತ್ಸಾ ಕೇಂದ್ರದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎನ್ನುತ್ತಿರುವ ನಡುವೆಯೇ ಸೋಂಕಿತನೊಬ್ಬನಿಗೆ 24 ಗಂಟೆ ಕಾಯಿಸಿದ ನಂತರ ಆಕ್ಸಿಜನ್ ನೀಡಿವುದು ಮಂಗಳವಾರ ಬೆಳಕಿಗೆ ಬಂದಿದೆ.
ತಾಲೂಕಿನ ಗರಣಿ ಲಂಬಾಣಿ ತಾಂಡದ ಸೋಂಕಿತ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತೀವ್ರವಾಗಿ ನರಳಾಡುತ್ತಿದ್ದರೂ ಕೂಡ ವೈದ್ಯರು ಸುಳಿದಿಲ್ಲ, ಕೊನೆಗೆ ಸೋಂಕಿತನನ್ನು ಬೇರೆಡೆಗೆ ವರ್ಗಾಯಿಸುವಂತೆ ಆತನ ಪತ್ನಿ ವೈದ್ಯರಿಗೆ ತಿಳಿಸಿದ್ದಾರೆ, ಆಗಲೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ವಿಷಯ ತಿಳಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ವಿಚಾರಿಸಿದರೆ ಆಕ್ಸಿಜನ್ ಕೊರತೆ ಇಲ್ಲ ಎಂಬ ಸಿದ್ಧ ಉತ್ತರ ನೀಡಿದ್ದಾರೆ, ಕೊನೆಗೆ ಪರಿಶೀಲನೆ ಮಾಡಿದಾಗ ಸೋಂಕಿತನಿಗೆ 24 ಗಂಟೆ ಮುಂಚೆಯೇ ಆಕ್ಸಿಜನ್ ಅವಶ್ಯಕತೆ ಇದ್ದರೂ ನೀಡಿರಲಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಮಂಗಳವಾರ ಮಧ್ಯಾಹ್ನ 1.30ರಲ್ಲಿ ಆಕ್ಸಿಜನ್ ಒದಗಿಸಲಾಗಿದೆ.
ಸೋಮವಾರ ನಿರೀಕ್ಷಣಾ ಮಂದಿರದಲ್ಲಿ ನಡೆದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೇವಲ ಅಂಕಿ ಅಂಶಗಳಗಷ್ಟೇ ಸೀಮಿತವಾದಂತಾಗಿದ್ದು, ಸಭೆಯಿಂದ ಪತ್ರಕರ್ತರನ್ನು ದೂರವಿಟ್ಟು ನಂತರ ಮಾಹಿತಿ ನೀಡಿರುವುದು ಕೇವಲ ಪ್ರಚಾರಕ್ಕಾಗಿಯೇ ಎಂಬ ಚರ್ಚೆಯಾಗುತ್ತಿದೆ.
ಸ್ಯಾನಿಟೈಸರ್ ಸಪ್ಲೇ ಇಲ್ವಂತೆ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತರ ಗಂಟಲು ದ್ರವ ಮಾದರಿ ಸಂಗ್ರಹದ ನಂತರ ಪರೀಕ್ಷಿಸಿದ ಕೈ ಗವಸುಗಳಿಗೆ ಮತ್ತು ಸುತ್ತಮುತ್ತಲ ಸ್ಥಳದಲ್ಲಿ ಸ್ಯಾನಿಟೈಸ್ ಮಾಡಿದ ನಂತರ ಮತ್ತೊಬ್ಬ ವ್ಯಕ್ತಿಯ ಮಾದರಿ ತೆಗೆದುಕೊಳ್ಳಬೇಕೆಂದು ನಿಯಮ. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ನಿಯಮವನ್ನು ಪಾಲಿಸುತ್ತಿಲ್ಲ. ಎಲ್ಲರನ್ನು ಸಾಲಾಗಿ ನಿಲ್ಲಿಸಿ ಯಾವುದೇ ಸ್ಯಾನಿಟೈಸ್ ಮಾಡದೇ ಮಾದರಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಸೋಂಕಿತರ್ಲದವರಿಗೂ ಸೋಂಕು ಹರಡುವ ಸಂಭವವಿದೆ. ಸಿಬ್ಬಂದಿಯನ್ನು ಕೇಳಿದರೆ ಸ್ಯಾನಿಟೈಸರ್ ಸಪ್ಲೇ ಇ್ಲ ಎನ್ನುತ್ತಿದ್ದಾರೆ.
ಬಸ್‌ಗಳು ಫುಲ್: ಕೆಲಸ ಅರಸಿ ಮಹಾನಗರಗಳಿಗೆ ವಲಸೆ ಹೋಗಿದ್ದವರು ಈಗ ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಮಧುಗಿರಿ-ಪಾವಗಡಕ್ಕೆ ಬರುತ್ತಿದ್ದ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುತ್ತಿದ್ದವು. ಲಾಕ್‌ಡೌನ್‌ನಿಂದ ಜೀವನ ಸಾಗಿಸುವುದು ಕಷ್ಟ ಎಂಬ ಕಾರಣದಿಂದ ಬಹುತೇಕ ಸ್ವಗ್ರಾಮಗಳಿಗೆ ಮರಳುತ್ತಿದ್ದು, ಹಳ್ಳಿಗಳಿಗೆ ಕರೊನಾ ಹರಡುವ ಭೀತಿ ಆವರಿಸಿದೆ.