ರೋಣ: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಬಾದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆಯು ಸೋಮವಾರ ಜರುಗಿದ್ದು, ಜಾತ್ರಾ ತೇರು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ತೆರಳಿತು. ಹಗ್ಗವನ್ನು ಗ್ರಾಮಸ್ಥರು ಹಳಿ ಬಂಡಿಯಲ್ಲಿಟ್ಟುಕೊಂಡು ಮೆರವಣಿಗೆ ಮೂಲಕ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಿದರು.
ಮಾಡಲಗೇರಿ ಗ್ರಾಮದಿಂದ ಸೋಮವಾರ ಬೆಳಗ್ಗೆ 9ಗಂಟೆಗೆ ತೇರಿನ ಹಗ್ಗಗಳನ್ನು ಹಳಿ ಬಂಡಿ ಮೂಲಕ ಸಾಗಿಸಲಾಯಿತು. ಬನಶಂಕರಿದೇವಿ ಜಾತ್ರಾ ರಥಕ್ಕೆ 8 ಇಂಚು ದಪ್ಪದ ಪುಡಿನಾರಿನಿಂದ ಉರಿಗೊಳಿಸಿದ 250 ಅಡಿ ಉದ್ದ ಹಾಗೂ 450 ಕೆ.ಜಿ. ತೂಕ ಹೊಂದಿದ 2 ಹಗ್ಗಗಳನ್ನು ಪ್ರತ್ಯೇಕವಾಗಿ 2 ಹಳಿ ಬಂಡಿಯಲ್ಲಿಟ್ಟುಕೊಂಡು 20 ಕಿ.ಮೀ. ದೂರದ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಲಾಯಿತು.
ಮಾರ್ಗ ಬದಲಾವಣೆ: ಪ್ರತಿ ವರ್ಷ ಹಳಿ ಬಂಡಿಯು ಮಾಡಲಗೇರಿ, ನೈನಾಪುರ, ಡಾಣಕಶಿರೂರ, ಮಣ್ಣೇರಿ ಮೂಲಕ ಮಲಪ್ರಭಾ ನದಿ ದಾಟಿ ಚೋಳಚಗುಡ್ಡ ಮಾರ್ಗವಾಗಿ ಬನಶಂಕರಿ ತಲುಪುತ್ತಿತ್ತು. ಈ ಬಾರಿ ರಸ್ತೆ ಇಕ್ಕಟ್ಟು ಹಾಗೂ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣದಿಂದ ಮಾರ್ಗ ಬದಲಿಸಿ ಮಾಡಲಗೇರಿ, ನೈನಾಪುರ, ಬೇಲೂರು ಮಾರ್ಗದಿಂದ ಬನಶಂಕರಿ ದೇವಸ್ಥಾನ ತಲುಪಲಾಯಿತು.