ಮದ್ದೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಖಂಡಿಸಿ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟಿಸಲಾಯಿತು.
ತಾಲೂಕು ಕಚೇರಿಯ ಮುಂದೆ ಸೇರಿದ ಸಂಸ್ಥೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ಮಾತನಾಡಿ, ಜಿಲ್ಲೆಯ ಆಲೆಮನೆಯೊಂದರಲ್ಲಿ ನಡೆಸಲಾಗುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಬಗ್ಗೆ ಜಿಲ್ಲಾ ಹಾಗೂ ರಾಜ್ಯವ್ಯಾಪಿ ಸಂಚಲನ ಉಂಟಾಗಿದೆ. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಂಡು ತನಿಖೆ ನಡೆಸುತ್ತಿರುವುದು ಸರಿಯಷ್ಟೇ. ಆದರೆ, ಹೆಣ್ಣು ಭ್ರೂಣ ಹತ್ಯೆ ಹಲವಾರು ವರ್ಷಗಳಿಂದ ನಡೆಯುತ್ತಿರುವುದು ಅಮಾನವೀಯ ಸಂಗತಿ ಎಂದರು.
ಹೆಣ್ಣು ಭ್ರೂಣ ಹತ್ಯೆ ಸಮಾಜಕ್ಕೆ ಮಾರಕವಾಗಿದೆ. ಇದರಿಂದ ಲಿಂಗಾನುಪಾತದಲ್ಲಿ ಏರುಪೇರಾಗಿ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಿರುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸರ್ಕಾರ, ಆರೋಗ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನಾರಾಯಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಮುಖಂಡರಾದ ರಾಜಶೇಖರ್, ಯಶೋದಮ್ಮ, ವಿದ್ಯಾರ್ಥಿಗಳಾದ ಪ್ರೀತಿ, ಐಶ್ವರ್ಯಾ, ನಿಸರ್ಗಾ, ಪುಷ್ಪಾ, ಅಮೂಲ್ಯಾ, ಭೂಮಿಕಾ, ಪೂಜಾ, ವಿನೋದ್, ಪ್ರೀತು ಇತರರಿದ್ದರು.