ಪ್ರತಿಭಟನಾಕಾರರೊಂದಿಗೆ ತಹಸೀಲ್ದಾರ್ ಮಾತುಕತೆ
ಮದ್ದೂರು : ವಿಶ್ವ ಕರ್ಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಪೂರ್ವಸಿದ್ಧತಾ ಸಭೆ ಕೆರೆಯದೆ ಬೇಜಾಬ್ದಾರಿ ಪ್ರದರ್ಶನ ಮಾಡಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ವಿಶ್ವ ಕರ್ಮ ಸಮುದಾಯ ಸಂಘಟನೆ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯದ ಜಿಲ್ಲಾ ಉಸ್ತುವಾರಿ ತೈಲೂರು ಆನಂದಾಚಾರಿ ಈ ಸಂದರ್ಭ ಮಾತನಾಡಿ, ಸೆ.17 ರಂದು ರಾಜ್ಯಾದ್ಯಂತ ಸರ್ಕಾರ ಆದೇಶದ ಅನ್ವಯ ವಿಶ್ವಕರ್ಮ ಜಯಂತಿ ಆಚರಣೆ ನಡೆಯಲಿದೆ. ಆದರೆ, ತಾಲೂಕು ಆಡಳಿತ ಅಂದು ಜಯಂತಿ ಆಚರಿಸದೇ ಬೇರೆ ದಿನ ಮಾಡಲು ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಸೆ.17 ರಂದು ವಿಶ್ವಕರ್ಮ ಜಯಂತಿ ಮಾಡದಿದ್ದರೆ ತಾಲೂಕು ಆಡಳಿತ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾತುಕತೆ: ತಹಸೀಲ್ದಾರ್ ಡಾ.ಸ್ಮಿತಾ ರಾಮು ಅವರು ವಿಶ್ವಕರ್ಮ ಸಮುದಾಯದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದರು. ಸೆ.17 ರಂದು ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯಲ್ಲೇ ಜಯಂತಿ ಆಚರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸಂಘಟನೆಯ ತಾಲೂಕು ಅಧ್ಯಕ್ಷ ಬಸವಚಾರಿ, ಮುಖಂಡರಾದ ಮಂಟೇಸ್ವಾಮಿ, ಕುಮಾರಸ್ವಾಮಿ, ಸುರೇಶ್, ಕುಮಾರ್, ಸೋಮಚಾರಿ, ನಾಗರಾಜು, ಶ್ರೀನಿವಾಸ ಇತರರು ಇದ್ದರು.